ಜಿಲ್ಲೆ

'ರಾಹುಲ್​ಜೀ... ನಿಮ್ಮ ತಂದೆಯ ಕೊಲೆಪಾತಕಿಗಳನ್ನು ಬೆಂಬಲಿಸಿದವರಿಂದಲೇ ಇವ್ರು ಪ್ರಶಸ್ತಿ ಪಡೆದ್ರಲ್ಲ, ನಿಮ್ಗೆ ಒಪ್ಪಿಗೆನಾ?'

suchetana

ಬೆಂಗಳೂರು: 'ರಾಹುಲ್​ಜೀ... ನಿಮ್ಮ ತಂದೆಯನ್ನು ಹತ್ಯೆ ಮಾಡಿದವರ ಜತೆಗೇ ಸಖ್ಯ ಬೆಳೆಸ್ತಿರೋ ಸಿದ್ದರಾಮಯ್ಯ ನಿಮ್ಗೆ ಒಪ್ಪಿಗೆನಾ?'

ಹೀಗಂತ ಪ್ರಶ್ನಿಸ್ತಿದ್ದಾರೆ ಬಿಜೆಪಿ ನಾಯಕರು. ಕರ್ನಾಟಕಕ್ಕೆ ಆಗಮಿಸುತ್ತಿರುವ ಸಂಸದ ರಾಹುಲ್​ಗಾಂಧಿಯ ಮುಂದೆ ಈ ಪ್ರಶ್ನೆಯನ್ನು ಇಟ್ಟವರು ಬಿಜೆಪಿ ಶಾಸಕ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ‌ ಛಲವಾದಿ ನಾರಾಯಣಸ್ವಾಮಿ. ಪತ್ರಿಕಾಗೋಷ್ಠಿ ನಡೆಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದಕ್ಕೆ ಕಾರಣ, ಇತ್ತೀಚೆಗೆ ಸಿದ್ದರಾಮಯ್ಯನವರಿಗೆ ತಮಿಳುನಾಡಿನ ವಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ಈ ಬಾರಿ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ನೀಡಿದ್ದು, ಅದನ್ನು ಇವರು ತುಂಬಾ ಸಂತಸದಿಂದ ಸ್ವೀಕರಿಸಿದ್ದು!

ಈ ಬಗ್ಗೆ ರಾಹುಲ್​ ಗಾಂಧಿಯವರನ್ನು ಉದ್ದೇಶಿಸಿ ಮಾತನಾಡಿರುವ ಬಿಜೆಪಿ ನಾಯಕರು, ರಾಜೀವ್ ಗಾಂಧಿ ಹತ್ಯೆ ಮಾಡಿದವರ ಜತೆ ಸಿದ್ದರಾಮಯ್ಯ ಸಖ್ಯ ಬೆಳೆಸುತ್ತಿದ್ದಾರೆ. 1991ರಲ್ಲಿ ರಾಜೀವ್ ಗಾಂಧಿಯವರನ್ನು ಎಲ್​ಟಿಟಿಇ ಹತ್ಯೆ ಮಾಡಿತ್ತು. ಇವರನ್ನು ಬಿಡುಗಡೆ ಮಾಡಬೇಕೆಂದು ಇದೇ ವಿಸಿಕೆ ಪಕ್ಷ ತಮಿಳುನಾಡಿನಲ್ಲಿ ಒತ್ತಾಯ ಮಾಡಿತ್ತು. ಅಂಥ ಪಕ್ಷ ಕೊಟ್ಟಂತಹ ಪ್ರಶಸ್ತಿಯನ್ನು ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ, ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯನವರಿಗೆ ಗಾಂಧಿ ಕುಟುಂಬಕ್ಕೆ ಗೌರವ ಇದ್ದಿದ್ದರೆ ಆ ಪ್ರಶಸ್ತಿಯನ್ನು ನಿರಾಕರಿಸಬೇಕಿತ್ತು ಎಂದಿರುವ ಅವರು, ನಿಮ್ಮ ತಂದೆಯವರನ್ನು ಹತ್ಯೆ ಮಾಡಿದವರ ಜತೆಗೆ ಸಿದ್ದರಾಮಯ್ಯನವರ ಸಹಾನುಭೂತಿಯನ್ನು ನೀವು ಒಪ್ತಿರಾ ಎಂದು ರಾಹುಲ್​ ಮುಂದೆ ಪ್ರಶ್ನೆ ಇಟ್ಟಿದ್ದಾರೆ. ಜತೆಗೆ, ನಿಮ್ಮ ತಂದೆ ಹತ್ಯೆ ಮಾಡಿದ ವಿಸಿಕೆ ಪಕ್ಷದ ಪ್ರಶಸ್ತಿ ಪಡೆದ ಸಿದ್ದರಾಮಯ್ಯ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಲ್​ಟಿಟಿಇ ಬೆಂಬಲಿಸುವ ವಿಸಿಕೆ ಪಕ್ಷ ಬೆಂಬಲಿಸುವ ನಿಮ್ಮ ನಡೆ ಗಾಂಧಿ ಕುಟುಂಬಕ್ಕೆ ಅವಮಾನಮಾಡಿದಂತೆ ಆಗಲ್ವಾ? ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಯಾವ ಸಿದ್ದಾಂತವೂ ಇಲ್ಲ. ಅವರು ಅಧಿಕಾರಕ್ಕೆ ಏನು ಬೇಕಾದ್ರೂ ಮಾಡುತ್ತಾರೆ. ಸಮಾಜವಾದಿ ಸಿದ್ದರಾಮಯ್ಯ ಯೂಬ್ಲೆಟ್ ವಾಚ್ ಕಟ್ತಾರೆ. ಲೋಹಿಯಾ ಫಾಲೋವರ್ ಅರ್ಕಾವತಿ ಬಡಾವಣೆ ಮಾಡಲು ಡಿ ನೋಟಿಫಿಕೇಷನ್ ಮಾಡಿ ರೀಡುನೂ ಮಾಡ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ನಿಯಮ ಇದೆ. ಯಾರು ಕೆಪಿಸಿಸಿ ಅಧ್ಯಕ್ಷ ಇದ್ದಾರೆ, ಪಕ್ಷ ಅಧಿಕಾರಕ್ಕೆ ಬಂದಾಗ ಅವರನ್ನ ಸಿಎಂ ಮಾಡ್ತಾರೆ. ಈ ನಿಯಮ ತಮಗೆ ಮುಳ್ಳಾಗಬಹುದು ಅಂತ ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸ್ತಾರೆ. ಖರ್ಗೆ ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡ್ತಾರೆ. ಡಿಕೆಶಿ‌ ಅವರಿಗೆ ಖೆಡ್ಡಾ ತೋಡಲೆಂದೇ ಸಿದ್ದರಾಮೋತ್ಸವ ಮಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇಂದು ಯಾವ ದಾರುಣ ಪರಿಸ್ಥಿತಿ ಬಂದಿದೆ ಅಂದ್ರೆ. ಸ್ವತಃ ‌ ಸಿದ್ದರಾಮಯ್ಯ ಪರ ವ್ಯಕ್ತಿ ಪೂಜೆ ಆಗ್ತಿರೋದನ್ನ ನೋಡಿ ಹೈಕಮಾಂಡ್ ಕಣ್ಮುಚ್ಚಿ ಕುಳಿತಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮೋತ್ಸವ ಕಾಂಗ್ರೆಸ್ ಹಾಗೂ ಡಿಕೆಶಿಗೆ ಮಗ್ಗುಲ ಮುಳ್ಳಾಗಲಿದೆ. ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ ಸಂಪೂರ್ಣ ಸರ್ವನಾಶವಾಗಲಿದೆ ಎಂದೂ ಅವರು ಹೇಳಿದರು.