ಜಿಲ್ಲೆ

ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ ಲಕ್ಷಲಕ್ಷ ಡೀಲ್ ಮಾಡಿದ್ರಾ‌ ಸಿಸಿಬಿ ಪೊಲೀಸರು?

ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ಉದ್ಯಮಿಗಳನ್ನ ಫಿಕ್ಸ್ ಮಾಡಿ ಲಕ್ಷ ಲಕ್ಷ ಡೀಲ್ ಮಾಡಿರುವ ಆರೋಪವನ್ನು ಮಂಗಳೂರು ಪೊಲೀಸರು ಎದುರಿಸುತ್ತಿದ್ದಾರೆ.

ಮುಂಬೈ ಮತ್ತು ಮಂಗಳೂರು ಉದ್ಯಮಿಗಳಿಂದ ಲಕ್ಷ ಲಕ್ಷ ಪಡೆದ ಆರೋಪ ಇವರ ಮೇಲಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಉದ್ಯಮಿ ಕರುಣಾಕರ ಭಂಡಾರಿ ಎಂಬುವವವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ದಾಳಿ ಮಾಡಿದ್ದರು. ಆಗ ಅವರಿಂದ ಸಿಸಿಬಿ ಪಿಎಎಸ್‌ಐ ಕಬ್ಬಾಳ್ ರಾಜ್ 55 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪವಿದೆ.

ಈ ಕುರಿತು ‘ವಿಜಯವಾಣಿಗೆ‘ ಉದ್ಯಮಿಗಳ ಆಪ್ತ ಲಕ್ಷ್ಮೀಶ್ ಹೇಳಿಕೆ ನೀಡಿದ್ದಾರೆ. ಉದ್ಯಮಿ ಕರುಣಾಕರ ಭಂಡಾರಿ ಮಾತ್ರವಲ್ಲವೇ. ನನ್ನ ಮುಂಬೈ ಗೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ ಎಂದು ಅವರ ಆರೋಪಿಸಿದ್ದಾರೆ.

ಈ ವೇಳೆಯೂ ಸುಳ್ಳು ಕೇಸ್ ಹಾಕಿ ಮಾನ ಮರ್ಯಾದೆ ತೆಗೆಯೋದಾಗಿ ಬೆದರಿಸಿ ಒಬ್ಬರಿಂದ 35 ಲಕ್ಷ ಮತ್ತು ಇನ್ನೊಬ್ಬರಿಂದ 25 ಲಕ್ಷ ಪಡೆದಿದ್ದಾರೆ, ಜತೆಗೆ ಹರೀಶ್ ಮತ್ತು ವಿಶ್ವಾಸ್ ಎಂಬವರಿಂದಲೂ ಬೆದರಿಸಿ ಲಕ್ಷ ಲಕ್ಷ ಪಡೆದಿದ್ದಾರೆ ಎಂದು ಲಕ್ಷ್ಮೀಶ್ ಮಾಹಿತಿ ನೀಡಿದ್ದಾರೆ.

ಇವರೆಲ್ಲರೂ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಮರ್ಯಾದೆಗೆ ಅಂಜಿ ಹಣ ಕೊಟ್ಟಿದ್ದಾರೆ. ಸದ್ಯ ಇವರೆಲ್ಲರೂ ಬಂದು ಸಿಐಡಿ ಪೊಲೀಸರ ಎದುರು ಮಾಹಿತಿ ಕೊಡಲು ತಯಾರಿದ್ದಾರೆ ಎಂದು ತಿಳಿದುಬಂದಿದೆ.