ಹಾವೇರಿ: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಶುಲ್ಕ ಕಡಿಮೆ ಮಾಡಲು ಎ, ಬಿ, ಸಿ ವರ್ಗಗಳನ್ನಾಗಿ ವಿಂಗಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಯೂಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ನವೀನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಜಿ.ಎಂ.ಐ.ಟಿ. ಹೆಲಿಪ್ಯಾಡ್‌ನನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದ ಶುಲ್ಕ ಕಡಿಮೆಯಿದ್ದರೂ, ವೈದ್ಯಕೀಯ ಶಿಕ್ಷಣದ ವೆಚ್ಚ ಖಾಸಗಿ ವಲಯದಲ್ಲಿ ಹೆಚ್ಚಾಗುತ್ತಿದೆ. ಶೇ. 90-95 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಆಗುತ್ತಿಲ್ಲ. ಹೀಗಾಗಿ ಮ್ಯಾನೇಜ್ಮೆಂಟ್ ಹಾಗೂ ಎನ್.ಆರ್.ಐ ಸೀಟುಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ, ಆದರೆ ಅದು ದುಬಾರಿ ಆಗಿರುವುದರಿಂದ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿದ್ದೇವೆ. ವೈದ್ಯಕೀಯ ಕೋರ್ಸುಗಳ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧರಿಸುತ್ತದೆ. ಯೂಕ್ರೇನ್ ಯುದ್ಧ ಆರಂಭವಾದ ನಂತರ ಮಂಡಳಿಯೂ ಕೂಡಾ ಪುನರ್ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ಯೂಕ್ರೇನ್‌ನಿಂದ ವಾಪಸಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಅಪೂರ್ಣವಾಗಿದ್ದು, ಪರ್ಯಾಯ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದೆ ಎಂದು ಹೇಳಿದರು.
ಯೂಕ್ರೇನ್‌ನಲ್ಲಿ ಕೋರ್ಸುಗಳು ಭಿನ್ನವಾಗಿವೆ. ಎಲ್ಲ ರಾಜ್ಯಗಳ ವಿದ್ಯಾರ್ಥಿಗಳೂ ಇರುವುದರಿಂದ ಕೇಂದ್ರ ಚಿಂತನೆ ನಡೆಸಿದೆ ಎಂದರು.