ಜಿಲ್ಲೆ

ರಾಜೀನಾಮೆ ಕುರಿತು ಒಗಟಾಗಿ ಮಾತನಾಡಿದ ಆನಂದ್‌ ಸಿಂಗ್‌: ಅವರು ಎಲ್ಲೂ ಹೋಗಲ್ಲ ಎಂದ ಅಶೋಕ್‌

suchetana

ಬೆಂಗಳೂರು: ಸದ್ಯ ಸಚಿವ ಆನಂದ್ ಸಿಂಗ್‌ ಅವರ ರಾಜೀನಾಮೆಯ ಮಾತು ಹರಿದಾಡುತ್ತಿದೆ. ಇಂದು ಮಧ್ಯಾಹ್ನ ಹೊಸಪೇಟೆಯಲ್ಲಿ ಮಾತನಾಡಿದ್ದ ಆನಂದ್‌ ಸಿಂಗ್‌, ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದಲೇ ಆರಂಭವಾಗಿತ್ತು, ಇಲ್ಲಿಂದಲೇ ಅಂತ್ಯವಾಗಬಹುದು ಎಂದು ಒಗಟಾಗಿ ಹೇಳಿ ಹೆಲಿಕಾಪ್ಟರ್‌ ಏರಿ ಹೊರಟಿದ್ದರು. ನನ್ನನ್ನು ರಕ್ಷಣೆ ಮಾಡುವವವರು ರಾಜಕೀಯದಲ್ಲಿ ಬಹಳ ಜನ ಇದ್ದಾರೆ ಎಂದು ಓವರ್‌ ಕಾನ್‌ಫಿಡೆನ್ಸ್‌ನಲ್ಲಿ ಇದ್ದೆ. ಆದರೆ ಇದು ಸುಳ್ಳು ಎಂದು ಗೊತ್ತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು.

ಇದರ ಬೆನ್ನಲ್ಲೇ ಅವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಬಲವಾಗಿ ಹರಡತೊಡಗಿತ್ತು. ಜತೆಗೆ ಸುರಪುರ ಬಿಜೆಪಿ ಶಾಸಕ ರಾಜೂಗೌಡ ಜತೆ ಶುಕ್ರವಾರ ಬೆಂಗಳೂರಿಗೆ ಹೋಗಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಕುರಿತು ಚರ್ಚಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಈ ಮಧ್ಯೆಯೇ, ಮಾತನಾಡಿರುವ ಆರ್‌.ಅಶೋಕ್‌, ಆನಂದ್‌ ಸಿಂಗ್‌ ಅವರಿಗಿದ್ದ ಎಲ್ಲಾ ಅಸಮಾಧಾನ ಹೋಗಿದ್ದು, ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂಬುದಾಗಿ ಪರೋಕ್ಷವಾಗಿ ನುಡಿದರು. 'ಆನಂದ್ ಸಿಂಗ್ ಜತೆ ನಾನು, ಸಿಎಂ ಹಾಗೂ ರಾಜುಗೌಡ ಮಾತನಾಡಿದ್ದೇವೆ. ಅವರು ಸಮಾಧಾನವಾಗಿದ್ದಾರೆ. ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ ಎಂದಿದ್ದಾರೆ. ಇವರು ಈ ರೀತಿ ಹಿರಿಯರ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವುದು ಇದೇ ಮೊದಲೇನಲ್ಲ. ಆನಂದ್ ಸಿಂಗ್ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಅಶೋಕ್‌ ಹೇಳಿದರು.


ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಆನಂದ್‌ ಮುಂದುವರೆಯುತ್ತಾರೆ.‌ ಅಸಮಾಧಾನ ಇದ್ದರೆ ಸಮಸ್ಯೆಯನ್ನು ಮುಖ್ಯಮಂತ್ರಿ ಬಗೆಹರಿಸುತ್ತಾರೆ ಎಂದರು.

ನಾನು ಸಚಿವ ಸ್ಥಾನಕ್ಕಾಗಿ ಪೂಜೆ ಮಾಡಿಸಿಲ್ಲ. ಈ ವೇಣುಗೋಪಾಲಕೃಷ್ಣ ದೇವಸ್ಥಾನವನ್ನು ನಮ್ಮ ಅಜ್ಜ ಕಟ್ಟಿಸಿದ್ದರು. ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಲು ನನ್ನ ತಂದೆ ಬದುಕಿದ್ದಾಗಲೇ ನಿರ್ಧರಿಸಿದ್ದೆವು. ಈ ದೇವರನ್ನು ನಾನು ಪೂರ್ಣವಾಗಿ ನಂಬುತ್ತೇನೆ. ನನ್ನ ರಾಜಕೀಯ ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ… ಯಾವ ನಾಯಕರೂ ನನ್ನ ಬೆನ್ನಿಗಿಲ್ಲ ಎಂದು ಆನಂದ್​ ಸಿಂಗ್​ ದೇಗುಲ ಆವರಣದಲ್ಲಿ ಹೇಳುತ್ತಲೇ ನನ್ನ ಬೇಡಿಕೆ ಈಡೇರಿಸಿ, ಇಲ್ಲವಾದಲ್ಲಿ ನನ್ನ ದಾರಿ ನನಗೆ ಎಂದು ಬೆಳಗ್ಗೆ ಹೊಸಪೇಟೆಯ ದೇಗುಲದಲ್ಲಿ ಆನಂದ್‌ ಸಿಂಗ್‌ ಹೇಳಿದ್ದರು.