ಜಿಲ್ಲೆ

ನೀವೇ ಏನಾದ್ರೂ ಮಾಡಿ ಎಂದು ಬಿಎಸ್‌ವೈರನ್ನು ಭೇಟಿ ಮಾಡಿದ ಆನಂದ್‌ ಸಿಂಗ್‌- ಮಾಜಿ ಸಿಎಂ ಹೇಳಿದ್ದೇನು?

suchetana

ಬೆಂಗಳೂರು: ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಖಾತೆಯಿಂದ ಅಸಮಾಧಾನಗೊಂಡಿರುವ ಆನಂದ್ ಸಿಂಗ್ , ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗುವ ಮೊದಲು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತಾವು ಏಕೆ ಖಾತೆ ಬದಲಾವಣೆ ಕೇಳುತ್ತಿದ್ದೇವೆ, ಬೇರೆಯವರಿಂತ ತಾವು ಹೇಗೆ ಡಿಫರೆಂಟ್‌ ಎನ್ನುವ ಬಗ್ಗೆ ಆನಂದ್‌ ಸಿಂಗ್‌ ಯಡಿಯೂರಪ್ಪ ಅವರನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಬೇರೆ ವಲಸಿಗ ಸಚಿವರು ಬೇರೆ ಪಕ್ಷದಿಂದ ಬಂದವರು. ಆದರೆ ತಾವು ಮಾತ್ರ ಮೊದಲು ಬಿಜೆಪಿಯಲ್ಲಿ ಇದ್ದುಕೊಂಡು ನಂತರ ಕಾಂಗ್ರೆಸ್‌ಗೆ ಹೋದವರು. ಪುನಃ ಬಿಜೆಪಿ ಸೇರಿರುವ ಕಾರಣ, ತಮ್ಮ ಮೂಲ ಬಿಜೆಪಿಯೇ ಆಗಿದೆ. ಆದ್ದರಿಂದ ಪಕ್ಷದ ಮೂಲದವರಿಗೆ ಸರಿಯಾದ ಖಾತೆ ನೀಡಬೇಕಿದೆ ಎಂದು ಯಡಿಯೂರಪ್ಪನವರಿಗೆ ಹೇಳಿರುವುದಾಗಿ ತಿಳಿದುಬಂದಿದೆ.

ತಾವು ಚುನಾಯಿತರಾಗಲು ಯಡಿಯೂರಪ್ಪನವರು ಪಟ್ಟಿರುವ ಶ್ರಮ ಹಾಗೂ ಈ ಹಿಂದೆ ಪಕ್ಷಕ್ಕಾಗಿ ತಾವು ದುಡಿದಿರುವುದನ್ನು ಆನಂದ್‌ ಸಿಂಗ್‌ ನೆನಪಿಸಿಕೊಟ್ಟಿದ್ದಾರೆ.

ಆದರೆ ಖಾತೆ ಬದಲಾವಣೆಗೆ ಯಡಿಯೂರಪ್ಪನವರು ಯಾವುದೇ ಭರವಸೆ ಕೊಟ್ಟಿಲ್ಲ. ಬದಲಾಗಿ, ಸಂಬಂಧಪಟ್ಟವರ ಬಳಿ ಮಾತನಾಡಿ ನೋಡುತ್ತೇನೆ ಎಂದಷ್ಟೇ ಹೇಳಿದ್ದಾರೆ ಎನ್ನಲಾಗಿದೆ. ಇರುವ ಖಾತೆಯಲ್ಲಿಯೇ ಸದ್ಯ ಮುಂದುವರಿಯಿರಿ. ಸದ್ಯದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಇರುವ ಖಾತೆಯಲ್ಲಿ ಮುಂದುವರಿಯುವುದೇ ಉತ್ತಮ. ಈ ಸ್ಥಿತಿಯಲ್ಲಿ ಖಾತೆ ಬದಲಾವಣೆಗೆ ಪಟ್ಟು ಹಿಡಿದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಗೆ ಕಾರಣವಾಗುತ್ತದೆ. ಪ್ರವಾಸೋದ್ಯಮ ಖಾತೆ ಉತ್ತಮವಾಗಿದ್ದು, ಅದರಲ್ಲಿ ಮುಂದುವರಿಯಿರಿ ಎಂದು ಮನವೊಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ಹೊರನಡೆದ ಆನಂದ್ ಸಿಂಗ್‌ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.