ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿ ತಾಲೂಕಿನ ಜಕನೂರು ಗ್ರಾಮದಲ್ಲಿ ಸಿದ್ಧಶ್ರೀ 2022 ಉತ್ಸವ ಹಾಗೂ ಡೊಳ್ಳಿನ ಕಲಾವಿದರ ಬೃಹತ್ ಸಮಾವೇಶ ನಡೆಯುತ್ತಿದ್ದು, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಲ್ಲು-ಬಾಣ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆಯಿತು.
ಡೊಳ್ಳಿನ ಕಲಾವಿದರ ಸಂಘದ ಬ್ಯಾನರ್ ಉದ್ಘಾಟಿಸಿ, ದೀಪ ಬೆಳಗಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು. ಸಂಘಟಕರು ಕಂಬಳಿ ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದರು. ಈ ವೇಳೆ ಅವರಿಗೆ ಆಯೋಜಕರು ಬಿಲ್ಲು-ಬಾಣ ನೀಡಲು ಮುಂದಾದರು. ಆದರೆ ಸಿದ್ದರಾಮಯ್ಯ ಅದನ್ನು ಸ್ವೀಕರಿಸಲು ಹಿಂದೇಟು ಹಾಕಿದರು. ನಂತರ ಅವರ ಅಭಿಮಾನಿಗಳು ಬೃಹತ್ ಹಾರ ಹಾಕಿ ಸನ್ಮಾನಿಸಿದರು.
ಡೊಳ್ಳಿನ ಕಲಾವಿದರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್ಸೈಟ್ನಲ್ಲಿ ಸೇರಿಸಲು ಕಲಾವಿದರಿಂದ ಮನವಿ ಬಂದಾಗ, ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬರುತ್ತದೆ. ಈ ವೇಳೆ ನಿಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು. ಮುಂದಿನ ಸಲ ನಮ್ಮದೇ ಅಧಿಕಾರ ಬರುತ್ತದೆ. ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ನಿಮ್ಮ ಸಮಸ್ಯೆಗಳ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಭರವಸೆ ನೀಡಿದರು.
ಡೊಳ್ಳು ಕಲಾವಿದರು ಡೊಳ್ಳಿನ ಸಂಘ ಸೇರಿದ ಮೇಲೆ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು. ವಿದ್ಯಾಭ್ಯಾಸದ ಜೊತೆಗೆ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಇತ್ತೀಚಿಗೆ ಬಿಡುಗಡೆಯಾದ ಡೊಳ್ಳು ಸಿನಿಮಾವನ್ನು ವೀಕ್ಷಿಸಿದ್ದರ ಬಗ್ಗೆಯೂ ಅವರು ಪ್ರಸ್ತಾಪಿಸಿದರು. (ದಿಗ್ವಿಜಯ ನ್ಯೂಸ್)