ಜಿಲ್ಲೆ

ಕೌಶಲದಿಂದ ನಮ್ಮ ಜೀವನದಲ್ಲಿ ಯಶಸ್ಸು : ಸಂತೋಷ ಹೇಳಿಕೆ ಪ್ರಮಾಣ ಪತ್ರ ವಿತರಣೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಇಂದು ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ನಮ್ಮ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇರುವುದರಿಂದ ಜೀವನದಲ್ಲಿ ಪ್ರಸ್ತುತ ವಿದ್ಯಾಮಾನಕ್ಕೆ ಬೇಕಾದ ಕೌಶಲ ಕಲಿಯುವುದರ ಮೂಲಕ ನಮ್ಮ ಯಶಸ್ಸು ಇರುತ್ತದೆ. ಹೊಸ ಕ್ಷೇತ್ರದಲ್ಲಿ ಉದ್ಯಮ ಆರಂಭಿಸುವ ಪ್ರಯತ್ನ ಮಾಡಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಪ್ರಾಶುಂಪಾಲ ಸಂತೋಷ ಹೇಳಿದರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್, ಪಂಪ್ ಸೆಟ್ ರಿಪೇರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಕೆಲವೂಂದು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಲಭವಾಗಿ ಹಣಮಾಡುವ ಯೋಜನೆ, ಯೋಚನೆಗಳಿಗೆ ಮಾರು ಹೋಗದೇ, ಸ್ವಯಂ ಶಿಸ್ತು ಅಳವಡಿಸಿಕೊಂಡು ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು. ಇದಕ್ಕೆ ಪೂರಕವಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದೀರಿ. ಅದನ್ನು ಜೀವನ, ಸ್ವ ಉದ್ಯೋಗದಲ್ಲಿ ಉಪಯೋಗಿಸಿಕೊಂಡು ಯಶಸ್ವಿ ಗಳಿಸಿ ಎಂದರು.

ರುಡ್ ಸೆಟ್ ಸಂಸ್ಥೆ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಅಬ್ರಹಾಂ ಜೇಮ್ಸ್ ವಂದಿಸಿದರು. ಸುಮಾರು 33 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.