ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಲಿಕೆ ಚೆನ್ನಾಗಿದ್ದರೆ ಗಳಿಕೆ ಉತ್ತಮವಾಗಿರುತ್ತದೆ. ಕಲಿಕೆ ಸಂದರ್ಭದಲ್ಲಿ ಹೆತ್ತವರ ಶ್ರಮ, ಗಳಿಕೆಯ ಸಂದರ್ಭ ನಮ್ಮ ಪರಿಶ್ರಮ ಜೀವನ ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ರುಡ್‌ಸೆಟ್ ಸಂಸ್ಥೆಯಲ್ಲಿ ಕಲಿತ ತರಬೇತಿಗಳು ಎಲ್ಲರ ಬದುಕಿಗೆ ದಾರಿ ದೀಪವಾಗಲಿ, ಡಾ.ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆ ಸ್ಥಾಪಿಸುವುದರ ಮೂಲಕ ಅನೇಕ ಯುವಕರು ಸ್ವಂತ ಉದ್ಯೋಗದ ಮೂಲಕ ತನ್ನ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಸಿಸಿ ಕ್ಯಾಮರಾ ಅಳವಡಿಸುವಿಕೆ ಮತ್ತು ಟಿವಿ ಮತ್ತು ಇಲೆಕ್ಟ್ರಾನಿಕ್ಸ್ ಉಪಕರಣಗಳ ದುರಸ್ತಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ್ ಬಿ.ಪಿ.ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಅಜೇಯ ಸ್ವಾಗತಿಸಿ ತರಬೇತಿಯ ಹಿನ್ನೋಟ ನೀಡಿದರು. ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ, ಎಸಿ ಮತ್ತು ರೆಫ್ರೀಜರೇಟರ್ ದುರಸ್ತಿ ಮತ್ತು ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ನಿರೂಪಿಸಿದರು. ಕರುಣಾಕರ್ ಜೈನ್ ವಂದಿಸಿದರು. ಶಿಬಿರಾರ್ಥಿಗಳು ತರಬೇತಿಯ ಅನುಭವ ವ್ಯಕ್ತಪಡಿಸಿದರು.