ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಕಾಡುತ್ತಿದ್ದಾಗ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ರುಡ್‌ಸೆಟ್ ಆರಂಭಿಸಿತು. ಸಂಸ್ಥೆಯಲ್ಲಿ ಯುವಜನರಿಗೆ ಶಿಕ್ಷಣ, ಜ್ಞಾನ, ಕೌಶಲ, ನಡತೆ, ಮೌಲ್ಯಗಳನ್ನು ಕಲಿಸುವುದರ ಮೂಲಕ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಮಹತ್ವದ ಸೇವೆ ನೀಡುತ್ತಿದೆ ಎಂದು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಹೇಳಿದರು.
ಧರ್ಮಸ್ಥಳದ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ(ರುಡ್‌ಸೆಟ್)ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಸಂಸ್ಥೆಗಳಿಗೆ ನೀಡುವ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಬದುಕಿನಲ್ಲಿ ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ದೌರ್ಬಲ್ಯ ಸವಾಲಾಗಿಸಿಕೊಂಡು ಅವಕಾಶಗಳ ಆಯ್ಕೆ ಮಾಡಬೇಕು. ನಾವೆಲ್ಲ ಮಾನವೀಯತೆ ಇರುವ ಮಾನವರಾಗೋಣ ಎಂದರು.
ಸಮ್ಮೇಳನದಲ್ಲಿ ಭಾರತಾದ್ಯಂತ ಇರುವ ಎಲ್ಲ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರು ಮತ್ತು ಉಪನ್ಯಾಸಕರು ಭಾಗವಹಿಸಿದ್ಧರು.
ಗುರುಗ್ರಾಮದ ನಿರ್ದೇಶಕ ನಿರ್ಮಲ ಯಾದವ್, ಬೇರಾಂಪುರದ ಹೀಮಾದ್ರಿಮಿತ್ರ, ಗಾಜಿಯಾಬಾದ್‌ನ ಉಪನ್ಯಾಸಕ ವೀರೇಶ್ಕು ಮಾರ್ಸಿಂಗ್, ಬೆಂಗಳೂರಿನ ವಿ.ರವೀಂದ್ರ ಸಮ್ಮೇಳನದ ಅನುಭವ ಹಂಚಿಕೊಂಡರು.
ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಸ್ವಾಗತಿಸಿದರು. ಮೈಸೂರಿನ ಸರಿತಾ ವಂದಿಸಿದರು. ಉಪನ್ಯಾಸಕ ಲೋಹಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.