ಜಿಲ್ಲೆ

ಕುಂದಾಪುರಕ್ಕೆ 24 ಕೋಟಿ ರೂ.ಗ್ಯಾರಂಟಿ ಬಾಬ್ತು

ಇಂದಿರಾ ಎನ್ ಕೆ

ಕುಂದಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಫೆಬ್ರವರಿ ಬಾಬ್ತು 24,59,67,859 ರೂ. ಬಿಡುಗಡೆಗೊಂಡಿದ್ದು, ಇದುವರೆಗೆ ತಾಲೂಕಿಗೆ ಒಟ್ಟು 349, 44,77,652 ರೂ. ದೊರೆತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಕುಂದಾಪುರ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಗ್ಯಾರಂಟಿ ಅನುಷ್ಠಾನ ಸಮಿತಿ ಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೃಹಲಕ್ಷ್ಮೀಗೆ ಮೊತ್ತ 14,45,42,000 ರೂ., ಗೃಹಜ್ಯೋತಿಗೆ 4,18,46,445 ರೂ., ಅನ್ನಭಾಗ್ಯಕ್ಕೆ 3,41,37,810 ರೂ., ಶಕ್ತಿ ಯೋಜನೆಗೆ 2,40,58,604 ರೂ. ಹಾಗೂ ಯುವನಿಧಿಗೆ 13,83,000 ರೂ. ದೊರೆತಿದೆ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್ ಮಾತನಾಡಿ, ಗೃಹಲಕ್ಷ್ಮೀ ಫಲಾನುಭವಿಗಳ ಆಧಾರ್ ಸೀಡಿಂಗ್ ಸಮಸ್ಯೆ ಇದ್ದರೆ ಸಿಡಿಪಿಒ ಕಚೇರಿಯಲ್ಲೇ ಸರಿಪಡಿಸಲಾಗುವುದು ಎಂದರು.

ಹರಿಪ್ರಸಾದ್ ಶೆಟ್ಟಿ ಮಾತನಾಡಿ, 50,500 ಮಂದಿ ಪೈಕಿ 1,012 ಮಂದಿಗೆ ಮಾತ್ರ ಗೃಹಲಕ್ಷ್ಮೀ ದೊರೆಯುತ್ತಿಲ್ಲ. ಇದಕ್ಕೆ ತಾಂತ್ರಿಕ ಕಾರಣವೂ ಒಂದು ಎಂದರು. ನಾರಾಯಣ ಆಚಾರ್, ಗಣೇಶ್ ಕುಂಭಾಶಿ ದನಿಗೂಡಿಸಿದರು. ಸಿಡಿಪಿಒ ಸಮಸ್ಯೆ ಬಗೆಹರಿಸುವ ಕುರಿತು ಭರವಸೆ ನೀಡಿದರು.

ಸದಸ್ಯರಾದ ವಾಣಿ ಆರ್.ಶೆಟ್ಟಿ ಮೊಳಹಳ್ಳಿ, ಮಂಜು ಕೊಠಾರಿ ಕೆರಾಡಿ, ಗಣೇಶ್ ಕುಂದಾಪುರ, ಆಶಾ ಕರ್ವಾಲ್ಲೋ, ಸವಿತಾ ಪೂಜಾರಿ, ಚಂದ್ರ ಕಾಂಚನ್ ಜನ್ನಾಡಿ, ಅರುಣ್ ಹಕ್ಲಾಡಿ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ ಸ್ವಾಗತಿಸಿದರು.

ಅಕ್ಕಿ ಪೂರೈಕೆ ಮಾಹಿತಿ ಕಡ್ಡಾಯ

ಸಮಿತಿ ಸದಸ್ಯ ಜಹೀರ್ ಅಹಮದ್ ಅನ್ನಭಾಗ್ಯ ಪಡೆಯಲು ಇರುವ ಸಮಸ್ಯೆ ಕುರಿತು ಹಂಚಿಕೊಂಡರು. ಈ ಬಾರಿ 15 ಕೆ.ಜಿ ಅಕ್ಕಿ ನೀಡುವ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದು ಕೋಣಿ ನಾರಾಯಣ ಆಚಾರ್ ಆಗ್ರಹಿಸಿದರು. ಅಭಿಜಿತ್ ಪೂಜಾರಿ ಹೇರಿಕುದ್ರು ದನಿಗೂಡಿಸಿದರು.