ಬೆಂಗಳೂರು: 'ನಮ್ಮ ಅಭ್ಯರ್ಥಿ ವಿರುದ್ಧ ಎಫ್ಐಆರ್ ದಾಖಲಿಸಿದಾಕ್ಷಣ ನಾವು ಹೆದರುತ್ತೇವೆ ಎಂದು ಕೊಂಡಿದ್ದರೆ ಅದು ನಿಮ್ಮ ಭ್ರಮೆ. ಕುಸುಮಾ ಇನ್ನೂ ಕಣ್ಣು ಬಿಟ್ಟಿಲ್ಲ. ಈಗಾಗಲೇ ಅವರ ಮೇಲೆ ಕೇಸ್ ಹಾಕಿಸಿದ್ದಾರೆ. ಇದಕ್ಕಿಂತಲೂ ಸಣ್ಣ ಮತ್ತು ನೀಚರಾಜಕಾರಣ ಯಾವುದಿದೆ... ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಆರ್ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಕಾರು ಚಾಲಕನ ವಿರುದ್ಧ ಬುಧವಾರ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದ ಡಿ.ಕೆ. ಶಿವಕುಮಾರ್, ಈ ಎಫ್ಐಆರ್‌ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್‍ಗೂ ಹೋಗಲ್ಲ. ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ಸಿದ್ದರಾಮಯ್ಯ ಮೇಲೆ ಕೇಸ್ ಹಾಕಲಿ. ಆದ್ರೆ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ ಎಂದು ಕಿಡಿಕಾರಿದರು. ಇದೆಲ್ಲವೂ ಸರ್ಕಾರದ ಕುಮ್ಮಕ್ಕು ಎಂದು ಗಂಭೀರ ಆರೋಪ ಮಾಡಿದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಹೆಣ್ಣು ಮಗಳ ಮೇಲಿನ ಶೋಷಣೆಯನ್ನು ಎದುರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು. ನಮ್ಮ ಕಾರ್ಯಕರ್ತರನ್ನ ಬೆದರಿಸುವ ಕೆಲಸ ಆಗ್ತಿದೆ ಎಂದು ಆರೋಪ ಮಾಡಿದರು.