ಬೆಂಗಳೂರು: ಡಿಕೆಶಿ ಹಸು ಅಲ್ಲ. ಅವರು ಕರೆದ ಕೂಡಲೇ ಚಿತ್ರನಟ ದರ್ಶನ್ ಓಡೋಡಿ ಬರಲು... ಡಿಕೆಶಿಗೆ ತಾಕತ್ತು ಇದ್ದರೆ ದರ್ಶನ್ರನ್ನ ಪ್ರಚಾರಕ್ಕೆ ಕರೆದುಕೊಂಡು ಬರಲಿ ಎಂದು ಸಚಿವ ಆರ್.ಅಶೋಕ್ ಸವಾಲು ಹಾಕಿದರು.
ಆರ್ಆರ್ ನಗರ ಕ್ಷೇತ್ರದ ಉಪಸಮರದ ಬಹಿರಂಗ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ ಪ್ರಚಾರ ನಡೆಸಿದ್ದರು. ಈ ಕುರಿತು ನಾನು ಕರೆದರೂ ದರ್ಶನ್ ಬರ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈ ಬಗ್ಗೆ ಭಾನುವಾರ ಮಧ್ಯಾಹ್ನ ಕಟುವಾಗಿ ಟೀಕಿಸಿದ ಅಶೋಕ್, ಕಾಂಗ್ರೆಸ್ನವರು ಹಸು ಅಲ್ಲ, ದರ್ಶನ್ ಕರು ಅಲ್ಲ. ಅವರು ಕರೆದ ಕೂಡಲೇ ದರ್ಶನ್ ಬರೋಕೆ. ಡಿಕೆಶಿಗೆ ತಾಕತ್ತು ಇದ್ದರೆ ಇದೇ ಸಂಜೆಯೊಳಗೆ ದರ್ಶನ್ರನ್ನು ಪ್ರಚಾರಕ್ಕೆ ಕರೆದುಕೊಂಡು ಬರಲಿ ಎಂದು ಬಹಿರಂಗ ಸವಾಲು ಎಸೆದರು.
ನಟ ದರ್ಶನ್ ಪ್ರಚಾರ ಸಂದರ್ಭದಲ್ಲಿ ಸಾಮಾಜಿಕ ಅಂತರ ಇರಲಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಬಿಜೆಪಿಯಿಂದ ಕೋವಿಡ್ ನಿಯಮಗಳ ಪಾಲನೆ ಆಗಿದೆ. ಕಾಂಗ್ರೆಸ್ನಿಂದ ನಿಯಮಗಳ ಉಲ್ಲಂಘನೆ ಆಗಿದೆ. ದರ್ಶನ್ ರ್ಯಾಲಿ ವೇಳೆ ನಾನೂ ಇದ್ದೆ. ದರ್ಶನ್ ಬಂದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಅದಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮ ಪಕ್ಷದಿಂದ ನೂರು ಕಾರ್ಯಕರ್ತರು ಮಾತ್ರ ಬಂದಿದ್ದರು. ಉಳಿದಂತೆ ಬಂದಿದ್ದ ಜನಕ್ಕೂ-ನಮಗೂ ಸಂಬಂಧ ಇಲ್ಲ ಎಂದರು. ದರ್ಶನ್ ನಮ್ಮ ಪರ ಪ್ರಚಾರಕ್ಕೆ ಬಂದಿದ್ದರಿಂದ ಕಾಂಗ್ರೆಸ್ನವರಿಗೆ ಭಯವಾಗಿದೆ. ಹಾಗಾಗಿ ಇಂಥ ಆರೋಪ ಮಾಡಿದ್ದಾರೆ ಎಂದರು.