ಜಿಲ್ಲೆ

ರೂಟ್ ಪರ್ಮಿಟ್, ಶಾಲಾ ಬಸ್‌ಗಳಿಂದ ಅನಧಿಕೃತ ಬಾಡಿಗೆ : ಟೂರಿಸ್ಟ್ ವಾಹನ ಚಾಲಕ-ಮಾಲೀಕರ ಸಂಘ ಅಸಮಾಧಾನ

ಸೌಮ್ಯ ಆರ್

ಬಂಟ್ವಾಳ: ರೂಟ್ ಪರ್ಮಿಟ್ ಬಸ್‌ಗಳು ಮತ್ತು ಶಾಲಾ ಬಸ್‌ಗಳು ಅನಧಿಕೃತವಾಗಿ ಬಾಡಿಗೆ ಮಾಡುತ್ತಿರುವುದನ್ನು ನಿಲ್ಲಿಸಿ ಟೂರಿಸ್ಟ್ ವ್ಯಾನ್ ಚಾಲಕ-ಮಾಲೀಕರಿಗೆ ಆಗುವ ತೊಂದರೆ ತಪ್ಪಿಸುವಂತೆ ಆರ್‌ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಿಗೆ ಬಂಟ್ವಾಳ ತಾಲೂಕು ಟೂರಿಸ್ಟ್ ವಾಹನ ಚಾಲಕ-ಮಾಲೀಕರ ಸಂಘದ ವತಿಯಿಂದ ಅಧ್ಯಕ್ಷ ಸದಾನಂದ ಹಳೆಗೇಟು ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ಬಂಟ್ವಾಳ ತಾಲೂಕಿನಲ್ಲಿ 80ಕ್ಕೂ ಹೆಚ್ಚು ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲ್ಸ್ ವಾಹನಗಳು ಇದ್ದು, ಮಿನಿ ಬಸ್ ಒಂದಕ್ಕೆ 60 ಸಾವಿರ ರೂ, ಟೆಂಪೋ ಟ್ರಾವೆಲರ್ 23 ಸಾವಿರ ರೂ. ವಾರ್ಷಿಕ ತೆರಿಗೆಯನ್ನು ಟೂರಿಸ್ಟ್ ಪರ್ಮಿಟ್ ಆಧಾರದಲ್ಲಿ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಈ ಟೂರಿಸ್ಟ್ ವಾಹನಗಳಿಗೆ ವಾರದಲ್ಲಿ ಒಂದು ಎರಡು ಬಾಡಿಗೆ ಆಗುತ್ತಿದ್ದು, ಚಾಲಕರು ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೂಟ್ ಪರ್ಮಿಟ್ ಬಸ್‌ಗಳು, ಸಿಟಿ ಬಸ್‌ಗಳು, ಮದುವೆ ಕಾರ್ಯಕ್ರಮದ ಬಾಡಿಗೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದಾಗಿ ಟೂರಿಸ್ಟ್ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಈ ರೂಟ್ ಬಸ್‌ಗಳಿಗೆ ಸರ್ಕಾರದಿಂದ ರಿಯಾಯಿತಿ ತೆರಿಗೆ ಇರುವುದರಿಂದ ಕಡಿಮೆ ಬಾಡಿಗೆಗೆ ಬರುತ್ತಿವೆ. ಟೂರಿಸ್ಟ್ ತೆರಿಗೆ ಕಟ್ಟಿಯೂ ಟೂರಿಸ್ಟ್ ವ್ಯಾನ್‌ಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಆದ್ದರಿಂದ ಇಂತಹ ಬಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಸಂಘದ ಕಾರ್ಯದರ್ಶಿ ಸುನೀಲ್, ಕೋಶಾಧಿಕಾರಿ ನಮೇಶ್ ಶೆಟ್ಟಿ, ಪ್ರಮುಖರಾದ ಜಬ್ಬಾರ್ ಅಜಿಲಮೊಗರು, ಚಂದ್ರಹಾಸ್ ಸಾಲೆತ್ತೂರು, ಮ್ಯಾಕ್ಸಿಂ ಸಿಕ್ವೇರಾ ಸಜೀಪ, ಸುಧಾಕರ ತುಂಬೆ ಮತ್ತಿತರರು ಉಪಸ್ಥಿತರಿದ್ದರು.