ಜಿಲ್ಲೆ

ಬ್ರೇನ್ ಮ್ಯಾಪಿಂಗ್​ನಿಂದ ಹೊರಬಿತ್ತು ಕೆಲಸದಾಕೆಯ ಕಳ್ಳತನ! ಮನೆ ಮಾಲೀಕರು ಶಾಕ್

ಮೋಹನ್​ ಶೆಟ್ಟಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಬ್ರೇನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಮನೆಗೆಲಸದಾಳು ಬಾಯ್ಬಿಟ್ಟು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.ಕೋಡಿಪಾಳ್ಯ ನಿವಾಸಿ ಶಾರದಮ್ಮ ಬಂಧಿತೆ. ಆಕೆಯಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವನ್ನು ಕೆಂಗೇರಿ ಪೊಲೀಸರು ಜಪ್ತಿ ಮಾಡಿದ್ದಾರೆ. ಕೋಡಿಪಾಳ್ಯ ವಿನಾಯಕ ಲೇಔಟ್​ನ ರಿಯಲ್ ಎಸ್ಟೇಟ್ ಏಜೆಂಟ್ ಶಶಿಕಾಂತ್ ಮನೆಯಲ್ಲಿ ಶಾರದಮ್ಮ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿನಾಯಕ ಲೇಔಟ್​ನಲ್ಲಿ ಶಶಿಕಾಂತ್ ಕುಟುಂಬ ನೆಲೆಸಿದೆ. ಶಶಿಕಾಂತ್​ರ ಪತ್ನಿ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುಶೂಷಕಿಯಾಗಿದ್ದಾರೆ. ಮೂರು ತಿಂಗಳಿಂದ ಅವರ ಮನೆಯಲ್ಲಿ ಶಾರದಮ್ಮ ಕೆಲಸಕ್ಕೆ ಹೋಗುತ್ತಿದ್ದಳು. ಮಾಲೀಕರಿಗೆ ತಿಳಿಯದಂತೆ ಒಂದೊಂದಾಗಿ ಆಭರಣವನ್ನು ಕಳವು ಮಾಡಿದ್ದರು. ಕೆಲ ದಿನಗಳ ಹಿಂದೆ ಶಶಿಕಾಂತ್ ಪತ್ನಿಗೆ ಆಭರಣ ನಾಪತ್ತೆಯಾಗಿರುವ ಸಂಗತಿ ಅರಿವಿಗೆ ಬಂದಿದೆ. ಈ ಬಗ್ಗೆ ಮನೆಯಲ್ಲಿ ಹುಡುಕಾಡಿದಾಗ ಪತ್ತೆಯಾಗಿಲ್ಲ. ಅನುಮಾನದ ಮೇಲೆ ಮನೆ ಕೆಲಸದಾಳು ಶಾರದಮ್ಮಳನ್ನು ಪ್ರಶ್ನಿಸಿದಾಗ ತನಗೇನು ತಿಳಿದಿಲ್ಲ ಎಂದಿದ್ದಾರೆ.

ಕೊನೆಗೆ ಕೆಂಗೇರಿ ಠಾಣೆಗೆ ಶಶಿಕಾಂತ್ ನೀಡಿದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಶಾರದಮ್ಮಳ ವಿಚಾರಣೆ ನಡೆಸಿದಾಗಲೂ ಬಾಯ್ಬಿಟ್ಟಿಲ್ಲ. ಕೊನೆಗೆ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್​ಎಸ್​ಎಲ್) ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಭರಣಗಳು ಪತ್ತೆಯಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.