ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ನೀರ್ಚಾಲು ಗ್ರಾಮ ಕಚೇರಿ ವ್ಯಾಪ್ತಿಯ ಅನೆಬೈಲು ಎಂಬಲ್ಲಿ ನಿರಂತರವಾಗಿ ಸುರಿಯುವ ಮಳೆಯಿಂದಾಗಿ, ಗ್ರಾಮ ಪಂಚಾಯಿತಿ ರಸ್ತೆಯ ಬದಿಯಲ್ಲಿ ಕುಳಿ ರೂಪುಗೊಂಡಿದ್ದು, ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ.
ಮೇಲ್ನೋಟಕ್ಕೆ ಸಣ್ಣ ರಂಧ್ರವಾಗಿ ಕಂಡುಬಂದರೂ ಒಳಗಡೆ ಆಳವಾಗಿ ಮಣ್ಣು ಕುಸಿತ ಉಂಟಾಗಿರುವುದು ಕಂಡುಬಂದಿದೆ.
ನಿರಂತರ ಮಳೆ, ಮಳೆ ನೀರು ಹರಿದು ಸಾಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದು ಅಪಾಯಕ್ಕೆ ಕಾರಣವಾಗಿದೆ. ಹಲವೆಡೆ ವಿವಿಧ ಕೇಬಲ್‌ಗಳು ಮತ್ತು ಪೈಪ್‌ಲೈನ್‌ಗಳಿಗಾಗಿ ಅಗೆದ ಪ್ರದೇಶಗಳಲ್ಲಿ ಮಣ್ಣೆದ್ದು ಮಳೆ ನೀರಿಗೆ ಕೊಚ್ಚಿ ಕಂದಕಗಳೂ ಸೃಷ್ಟಿಯಾಗುತ್ತಿದೆ.
ಆನೆಬೈಲಿನಲ್ಲಿ ಉಂಟಾದ ಕುಳಿ ಭೀತಿಗೆ ಕಾರಣವಾಗಿದ್ದು, ಈ ಬಗ್ಗೆ ನೀರ್ಚಾಲು ಗ್ರಾಮಾಧಿಕಾರಿಗಳಿಗೆ ಸ್ಥಳೀಯರು ಈಗಾಗಲೇ ದೂರು ನೀಡಿದ್ದಾರೆ.