ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮಳೆಗಾಲದಲ್ಲಿ ರಸ್ತೆ ಹೊಂಡಗಳಿಂದ ಕೂಡಿರುವ ಅದರಲ್ಲೂ ಚೆಂಬುಗುಡ್ಡೆಯಿಂದ ಪಂಡಿತ್ ಹೌಸ್‌ವರೆಗಿನ ಹೊರರಸ್ತೆ ನಿರಂತರ ಗುಂಡಿಗಳಿಂದ ಸಂಚಾರ ಅಯೋಗ್ಯ ಎನಿಸಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸ್ಪೀಕರ್ ಯು.ಟಿ.ಖಾದರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉಳ್ಳಾಲ ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊಕ್ಕೊಟ್ಟಿನಿಂದ ಕುತ್ತಾರ್‌ವರೆಗೆ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ಚೆಂಬುಗುಡ್ಡೆಯಿಂದ ಕುತ್ತಾರ್‌ವರೆಗಿನ ರಸ್ತೆ 3 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇದೀಗ ಈ ರಸ್ತೆಯ ಸಾಕಷ್ಟು ಕಡೆ ಡಾಂಬರು ಶಿಥಿಲಗೊಂಡಿದೆ. ವಾಹನ ಸಂಚಾರಕ್ಕೂ ಯೋಗ್ಯವಾಗಿಲ್ಲ ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಈ ರಸ್ತೆಯನ್ನು ತಕ್ಷಣ ಸಂಚಾರ ಯೋಗ್ಯವಾಗಿಸಲು ದುರಸ್ತಿಗೆ ಕ್ರಮ ಜರುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗೆ ಸ್ಪೀಕರ್ ಯು.ಟಿ.ಖಾದರ್ ಪತ್ರ ಬರೆದಿದ್ದಾರೆ. ಕಳೆದ ಆ.2ರಂದು ಈ ರಸ್ತೆಯ ದುರವಸ್ಥೆಯ ಬಗ್ಗೆ ವಿಜಯವಾಣಿ ಅಗ್ರ ಸುದ್ದಿ ಪ್ರಕಟಿಸಿ ಗಮನ ಸೆಳೆದಿತ್ತು.
ಡಿವೈಎಫ್‌ಐ ಪ್ರತಿಭಟನೆ
ತೊಕ್ಕೊಟ್ಟು ಕುತ್ತಾರ್ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ ನೇತೃತ್ವದಲ್ಲಿ ಬಬ್ಬುಕಟ್ಟೆ ಬಳಿ ಸೋಮವಾರ ಪ್ರತಿಭಟನೆ ನಡೆಯಿತು. ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ವರ್ಷದ ಹಿಂದೆ ಹಾಕಲಾಗಿದ್ದ ಡಾಂಬರು ಒಂದೇ ಮಳೆಗೆ ಹಾಳಾಗಿದೆ. ಗುತ್ತಿಗೆದಾರರು ಭ್ರಷ್ಟಾಚಾರ ಮಾಡಿ ರಸ್ತೆ ಕೆಲಸ ಮಾಡಿದ್ದಾರೆ. ಪ್ರತಿವರ್ಷ ಹದಗೆಟ್ಟ ರಸ್ತೆಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಾರೆ. ಈ ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಶೀಘ್ರ ಸರಿಪಡಿಸದೆ ಇದ್ದಲ್ಲಿ ಸರಣಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್‌ಐ ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೊಕೇಟ್ ನಿತಿನ್ ಕುತ್ತಾರ್, ಡಿವೈಎಫ್‌ಐ ಉಳ್ಳಾಲ ತಾಲೂಕು ಕೋಶಾಧಿಕಾರಿ ಅಶ್ಫಾಕ್ ಅಲೇಕಲ, ಉಪಾಧ್ಯಕ್ಷ ಅಶ್ರಫ್ ಹರೇಕಳ, ರಝಾಕ್ ಮುಡಿಪು, ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಮುಡಿಪು, ಕಾರ್ಯದರ್ಶಿ ಜಗದೀಶ್, ಕಾರ್ಮಿಕ ಮುಖಂಡರಾದ ಜನಾರ್ದನ ಕುತ್ತಾರ್, ರೋಹಿದಾಸ್ ಭಟ್ನಗರ, ಇಬ್ರಾಹಿಂ ಮದಕ, ಸುಂದರ ಕೆಂಪುಗುಡ್ಡೆ, ಚಂದ್ರಹಾಸ ಪಿಲಾರ್, ರಫೀಕ್ ಹರೇಕಳ, ಡಿವೈಎಫ್‌ಐ ಮುಖಂಡರಾದ ರಿಯಾಝ್ ಮಂಗಳೂರು, ಹಂಝ ಕಿನ್ಯಾ, ದಿವ್ಯರಾಜ್ ಕುತ್ತಾರ್, ಮಿಥುನ್ ಕುತ್ತಾರ್, ಹೈದರ್ ಹರೇಕಳ, ಶ್ರವಣ್ ತೇವುಲ, ವಿಕಾಸ್ ಕುತ್ತಾರ್, ಬಶೀರ್ ಲಚ್ಚಿಲ್, ರಿಜ್ವಾನ್ ಆಲಡ್ಕ, ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವನ್ ಹರೇಕಳ, ಜತೆ ಕಾರ್ಯದರ್ಶಿ ಸುನೀಲ್ ತೇವುಲ ಮುಂತಾದವರು ಉಪಸ್ಥಿತರಿದ್ದರು.