ಜಿಲ್ಲೆ

ಎಸ್ಟಿ-ಎಸ್ಸಿ ಕಾಲನಿಗಿಲ್ಲ ರಸ್ತೆ ಭಾಗ್ಯ : 2.5 ಕಿ.ಮೀ ಮಾರ್ಗಕ್ಕಾಗಿ ದಶಕದ ಹೋರಾಟ : ಜವಾಬ್ದಾರಿ ಮರೆತ ಇಲಾಖಾಧಿಕಾರಿಗಳು

ಸೌಮ್ಯ ಆರ್

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಕೂಟೇಲು- ಸಂಕೇಶ-ಮಣಿಯೇರು ಪರಿಶಿಷ್ಟ ಜಾತಿ ಕಾಲನಿಯ ಪಂಚಾಯಿತಿ ರಸ್ತೆ ಸ್ಥಿತಿ ಶೋಚನೀಯವಾಗಿದೆ. ಅನುದಾನ ಕೊರತೆ ನೆಪವೊಡ್ಡಿ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ಪಟ್ರಮೆ ಸೇತುವೆ ಬಳಿ ಮುಖ್ಯರಸ್ತೆಯಿಂದ ಕವಲಾಗುವ ಈ ರಸ್ತೆ ಸುಮಾರು 2.5 ಕಿ.ಮೀ ಉದ್ದವಿದೆ. 27-30 ವರ್ಷಗಳ ಹಿಂದೆ ನಿರ್ಮಿತವಾಗಿದ್ದು, ಕಚ್ಚಾ ರಸ್ತೆಯಾಗಿದೆ. ಪ್ರಧಾನಮಂತ್ರಿಗೆ ಪತ್ರ: ಸ್ಥಳೀಯ ನಿವಾಸಿಗಳು ಸಮಾಜ ಕಲ್ಯಾಣ ಇಲಾಖೆಗೆ ರಸ್ತೆ ಅವ್ಯವಸ್ಥೆ ಬಗ್ಗೆ ಮನವಿ ಸಲ್ಲಿಸಿದ್ದರು. ಕಾಟಾಚಾರಕ್ಕೆ ಪರಿಶೀಲನೆ ನಡೆಸಿ ಕೈತೊಳೆದುಕೊಂಡದ್ದು ಬಿಟ್ಟರೆ ಪ್ರಯೋಜನ ಶೂನ್ಯ. ಪ್ರಯತ್ನ ಬಿಡದ ಸ್ಥಳೀಯರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ 3 ಬಾರಿ ಮನವಿ ಸಲ್ಲಿಸಿ ಸಮಸ್ಯೆಯ ಸಂಪೂರ್ಣ ಚಿತ್ರಣ ಕಳುಹಿಸಿಕೊಟ್ಟಿದ್ದರು. ಪ್ರಧಾನಿ ಕಾರ್ಯಾಲಯದಿಂದ ಜಿಲ್ಲಾ ಕಾರ್ಯಾಲಯಕ್ಕೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಮೂರು ಬಾರಿ ಸೂಚನೆ ನೀಡಿದ್ದರೂ ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೆ ಸಿಕ್ಕಿಲ್ಲ. ಸಮಸ್ಯೆ ಪರಿಹಾರವಾಗಿದೆಯೇ ಎಂಬ ಕಾಳಜಿಯ ಕರೆ ಪ್ರಧಾನಿ ಕಾರ್ಯಾಲಯದಿಂದ ಪದೇ ಪದೆ ಮನವಿದಾರರಿಗೆ ಬರುತ್ತಿದೆ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿಯೂ ರಸ್ತೆ ಬಗ್ಗೆ ಕೇಳಿದಾಗ ಇದು ಕಚ್ಚಾ ರಸ್ತೆಯಾಗಿದ್ದು, ದುರಸ್ತಿಗೆ ಒಂದು ಕೋಟಿ ಐದು ಲಕ್ಷ ರೂ. ಖರ್ಚಾಗಬಹುದು ಎಂಬ ಪ್ರತಿಕ್ರಿಯೆ ಸಿಕ್ಕಿರುತ್ತದೆ. ಶಾಸಕರ ಜನಸ್ಪಂದನ ಸಭೆಯಲ್ಲಿ ಸಮಸ್ಯೆ ಕುರಿತು ಚರ್ಚೆಯಾಗಿದೆ. 2010ರಿಂದ ಮೂರು ಅವಧಿಗೆ ರಸ್ತೆಯ ನಿತ್ಯ ಬಳಕೆದಾರ ಮನೆಯವರೇ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೂ ಈ ರಸ್ತೆಗೆ ಕಾಯಕಲ್ಪ ಒದಗಿಸಲು ಸಾಧ್ಯವಾಗಿಲ್ಲ. ಪ್ರತಿ ಚುನಾವಣೆಗಳ ಸಂದರ್ಭ ಅಭ್ಯರ್ಥಿಗಳು ಭರವಸೆ ನೀಡುತ್ತಾರೆ ಆದರೆ ಮತ್ತೆ ಮರೆಯುತ್ತಾರೆ. ಹಲವು ಕಡೆ ಅಗಲ ಕಿರಿದಾದ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಅಟೋರಿಕ್ಷಾಗಳೂ ಸಂಚರಿಸಲಾಗುತ್ತಿಲ್ಲ. ದ್ವಿಚಕ್ರ ವಾಹನ ಎದ್ದುಬಿದ್ದು ಸಂಚರಿಸುವುದು ಪ್ರತಿನಿತ್ಯ ಕಂಡುಬರುತ್ತದೆ. ಶಾಲಾ ಮಕ್ಕಳು ನಿತ್ಯ ನಡೆದುಕೊಂಡೇ ದೂರದ ಶಾಲೆಗಳಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಸಣ್ಣಪುಟ್ಟ ಕೃಷಿಕರೇ ಇರುವ ಇಲ್ಲಿ ಮಳೆಗಾಲದಲ್ಲಿ ಕೃಷಿಯುತ್ಪನ್ನ ಸಾಗಿಸಬೇಕಾದರೆ ಅಥವಾ ಕೃಷಿಗೆ ಅಗತ್ಯವಿರುವ ಗೊಬ್ಬರ ಇತ್ಯಾದಿಗಳನ್ನು ತರಬೇಕಾದರೆ ಹರಸಾಹಸ ಪಡಬೇಕಾಗಿದೆ. ಸಮರ್ಪಕ ರಸ್ತೆಯಿಲ್ಲದೆ ಶಾಲೆ ಬಂದ್! ಈ ರಸ್ತೆಯಲ್ಲಿ ಸುಮಾರು 1 ಕಿ.ಮೀ. ದೂರದ ಬದಿಪಲ್ಕೆ ಎಂಬಲ್ಲಿ 1995-96ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೆರೆದಿತ್ತು. ಆದರೆ ರಸ್ತೆ ಸರಿ ಇಲ್ಲದೆ ಮಳೆಗಾಲದಲ್ಲಿ ನಡೆದುಕೊಂಡೇ ಹೋಗಬೇಕಾದ ದುಸ್ಥಿತಿಯಿಂದಾಗಿ ಇಲ್ಲಿಗೆ ಯಾರೂ ಶಿಕ್ಷಕರು ಬರಲು ಒಪ್ಪುತ್ತಿರಲಿಲ್ಲ. ಇದರಿಂದಾಗಿ ಅಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬರು ಶಿಕ್ಷಕರಿಗೆ ನಿವೃತ್ತಿ ಆದೊಡನೆಯೇ ಶಾಲೆಯೇ ಮುಚ್ಚಲ್ಪಟ್ಟು ಇದೀಗ ಮೂರು ವರ್ಷಗಳಿಂದ ಅಲ್ಲಿ ಶಾಲೆಯೂ ಇಲ್ಲ. ಶಿಥಿಲಾವಸ್ಥೆಯಲ್ಲಿದೆ ಸೇತುವೆ ರಸ್ತೆಯ ಪ್ರಾರಂಭದ 100 ಮೀಟರ್ ಅಂತರದಲ್ಲಿ ಪಂಚಾಯಿತಿ ವತಿಯಿಂದ ಕಿರುಸೇತುವೆ ನಿರ್ಮಿಸಲಾಗಿದ್ದು, 25ಕ್ಕೂ ಅಧಿಕ ವರ್ಷವಾಯಿತು. ಸೇತುವೆ ಸಂಚರಿಸಲು ಸಾಧ್ಯವಿಲ್ಲದಷ್ಟು ಶಿಥಿಲವಾಗಿದೆ. ಈ ಪ್ರದೇಶದವರಿಗೆ ಬದಲಿ ರಸ್ತೆ ಇಲ್ಲದ್ದರಿಂದ ಬಳಕೆ ಅನಿವಾರ್ಯವಾಗಿದೆ.

ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಯವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸ್ಥಳೀಯರೆಲ್ಲರೂ ಒಮ್ಮತದ ನಿರ್ಧಾರದಿಂದ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ನಮ್ಮ ಹಕ್ಕನ್ನು ಪಡೆದುಕೊಳ್ಳುವವರೆಗೂ ಹೋರಾಟ ಮಾಡುತ್ತೇವೆ. ಗಿರೀಶ್ ಮಣಿಯೇರು, ಸ್ಥಳೀಯರು, ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದವರು ದಶಕದಿಂದ ಈ ರಸ್ತೆಗಾಗಿ ಮನವಿ ನೀಡುತ್ತಾ ಬರುತ್ತಿದ್ದೇವೆ. ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡವನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ. ವಾಹನ ಬಾರದಿರುವ ಕಾರಣ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ನನ್ನ ಪತ್ನಿಯನ್ನು ಮರಳಿ ಮನೆಗೆ ಕರೆತರಲಾಗುತ್ತಿಲ್ಲ. ಸಂಬಂಧಿಕರ ಮನೆಯಲ್ಲಿಯೇ ಉಳಿಸಿಕೊಳ್ಳುವಂತಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಪ್ರದೇಶದ ಜನರ ಬದುಕುವ ಹಕ್ಕನ್ನು ಕಸಿದುಕೊಂಡಿರುವ ಜತೆಗೆ ಸಾಮಾಜಿಕ ದೌರ್ಜನ್ಯ ಎಸಗಿದ್ದಾರೆ. ಪುಟ್ಟಣ್ಣ ಮಣಿಯೇರು, ಸ್ಥಳೀಯರು, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಪಂಚಾಯಿತಿ ಅನುದಾನದಲ್ಲಿ ಈ ರಸ್ತೆಯ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗದ ಮಾತು. ಹೀಗಿರುವಾಗ ಶಾಸಕರ ಪ್ರಯತ್ನವೇ ಅತೀ ಅಗತ್ಯವಾಗಿದೆ. ಶಾಸಕರೇ ನಿರ್ಲಕ್ಷೃ ಮಾಡಿದರೆ ರಸ್ತೆ ಬಳಕೆದಾರರು ಎಚ್ಚರವಹಿಸಿ ಶಾಸಕರು ಅನುದಾನ ಒದಗಿಸುವಂತೆ ಮಾಡುವ ಪ್ರಜ್ಞಾವಂತಿಕೆ ತೋರಬೇಕಾಗಿದೆ. ಶ್ಯಾಮರಾಜ್ ಪಟ್ರಮೆ ಗ್ರಾಪಂ ಮಾಜಿ ಸದಸ್ಯ