ಜಿಲ್ಲೆ

ಹೆದ್ದಾರಿಯಲ್ಲಿ ಹೊಂಡಗಳ ತಾಂಡವ ! : ಡಾಂಬರಿಗಿಂತ ಗುಂಡಿಗಳೇ ಹೆಚ್ಚು : ಗುರುವಾಯನಕೆರೆ-ಕಾರ್ಕಳ ಹೈವೆ ದುಸ್ಥಿತಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮಳೆಯಿಂದಾಗಿ ಹೆದ್ದಾರಿಗಳು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಭಾರಿ ಹೊಂಡಗಳಿದ್ದು, ಇದನ್ನು ತಪ್ಪಿಸುವ ಸಲುವಾಗಿ ಚಾಲಕರು ಹಠಾತ್ ತಮ್ಮ ವಾಹನಗಳನ್ನು ಬೇರೆಡೆಗೆ ತಿರುಗಿಸುವಾಗ ಅಪಘಾತಗಳಾಗುತ್ತಿವೆ. ಇದು ಗುರುವಾಯನಕೆರೆ-ಕಾರ್ಕಳ ರಾಜ್ಯ ಹೆದ್ದಾರಿಯ ಚಿಂತಾಜನಕ ಸ್ಥಿತಿಯಾಗಿದೆ.

ವಾಹನಗಳು ವೇಗವಾಗಿ ಸಂಚರಿಸುವಾಗ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರು ಪಾದಚಾರಿಗಳ ಮೇಲೆ ಸಿಂಚನವಾಗುತ್ತಿದೆ. ನಿತ್ಯವೂ ಕನಿಷ್ಠ ಒಂದೆರಡು ದ್ವಿಚಕ್ರ ವಾಹನಗಳು ಹೊಂಡಕ್ಕೆ ಬಿದ್ದು ಅವಘಡಗಳು ಆಗುತ್ತಿವೆ.

ರಾಷ್ಟ್ರೀಯ ಹೆದ್ದಾರಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಅಭಿವದ್ಧಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಬದಿ ಸುರಿದಿರುವ ಮಣ್ಣಿನಲ್ಲಿ ವಾಹನಗಳು ಹೂತುಹೋಗುವ ಸಾಧ್ಯತೆ ಇದೆ. ವಿದ್ಯುತ್ ಕಂಬಳಿರುವ ಪ್ರದೇಶದ ರಸ್ತೆಯ ಹೊಂಡಗಳಲ್ಲಿ ನೀರು ನಿಲ್ಲುತ್ತಿದ್ದು, ವಿದ್ಯುತ್ ಅವಘಡಗಳಿಗೆ ಕಾರಣವಾಗುವ ಆತಂಕ ಇದೆ. ಕಾಮಗಾರಿ ನಡೆದ ಸ್ಥಳದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಲಾಗುತ್ತಿದೆ. ಜತೆಗೆ ಇಕ್ಕೇಲಗಳ ಚರಂಡಿ ಸಮೀಪ ಬೀದಿ ವ್ಯಾಪಾರವೂ ನಡೆಯುತ್ತಿದೆ.

ರಸ್ತೆ ವಿಸ್ತರಣೆ ಕಾಮಗಾರಿ ನಡೆಯಬೇಕಾದ ಸ್ಥಳಗಳಲ್ಲಿ ಡಾಂಬರು ಕಿತ್ತು ಹೋಗಿ ಬಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗಿವೆ. ಮುಂಡಾಜೆ ಸೇತುವೆಯ ಎರಡೂ ಬದಿಗಳ ತಿರುವುಗಳಲ್ಲಿರುವ ಹೊಂಡಗಳು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಹೊಸ ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಬದಿ ಎತ್ತರಗೊಳಿಸಲಾಗಿದ್ದು, ಇಲ್ಲಿಯ ಮಣ್ಣು ಮಳೆ ನೀರಿನೊಂದಿಗೆ ರಸ್ತೆಯ ಮೇಲೆ ಹರಿದು ಬರುತ್ತಿದೆ.

ರಾಷ್ಟ್ರೀಯ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳು ಈಗಾಗಲೇ ರಸ್ತೆ ಮೇಲೆ ವಾಲಲಾರಂಭಿಸಿದ್ದು, ಸಂಚಾರ ವ್ಯವಸ್ಥೆಗೆ ಅಡಚಣೆಯಾಗುತ್ತಿದೆ. ರಾಜ್ಯ ಹೆದ್ದಾರಿ ಹಾಗೂ ನಗರ ರಸ್ತೆಯನ್ನು ಸುಸಜ್ಜಿತಗೊಳಿಸಬೇಕೆಂದು ಗುರುವಾಯನಕೆರೆ ನಾಗರಿಕರು ಒತ್ತಾಯಿಸಿದ್ದಾರೆ.

ಗುರುವಾಯನಕೆರೆ ನಗರ ರಸ್ತೆಯ ದುಸ್ಥಿತಿ

ಪೇಟೆಯ ರಸ್ತೆಗಳಲ್ಲಿ ಡಾಂಬರಿಗಿಂತ ಬೃಹತ್ ಹೊಂಡಗಳೇ ಅಧಿಕವಿದ್ದು, ಸ್ಥಳೀಯ ಆಸ್ಪತ್ರೆಗೆ ಆಗಮಿಸುವವರ ಪೈಕಿ ರಸ್ತೆ ಅವಘಡಗಳಿಗೆ ತುತ್ತಾದವರೇ ಅಧಿಕ. ನಗರ ರಸ್ತೆಗಳಲ್ಲಿ ಸಂಚರಿಸುವುದು ದೊಡ್ಡ ಸಾಹಸ.

ಹೆದ್ದಾರಿಗಳ ಪರಿಸ್ಥಿತಿ ಕುರಿತು ಸರ್ಕಾರ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ತಕ್ಷಣ ಅಗತ್ಯ ಸ್ಥಳಗಳಲ್ಲಿ ಕಾಮಗಾರಿ ನಡೆಸಲು ಒತ್ತಡ ಹೇರಲಾಗಿದೆ. ಕೆ.ಪ್ರತಾಪ ಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ
  • ಗುರುವಾಯನಕೆರೆ ನಗರ ರಸ್ತೆಯಲ್ಲಿವೆ ಮರಣಕೂಪಗಳು
  • ರಸ್ತೆಯಲ್ಲೇ ನೀರು ಸಂಗ್ರಹ, ಅವಘಡಗಳಿಗೆ ಕರೆ
  • ಮುಂಡಾಜೆಯ ಮಾರ್ಗದಲ್ಲಿ ನೀರಿನ ಜತೆಗೆ ಕೆಸರಿನ ಹರಿವು