ಜಿಲ್ಲೆ

ಅರೆಬರೆ ಹೆದ್ದಾರಿ ಕಾಮಗಾರಿ:ಸಾಂಕ್ರಾಮಿಕ ರೋಗಗಳಿಗೆ ರಹದಾರಿ : ನೀರಿಗೆ ತ್ಯಾಜ್ಯ ಸೇರಿ ದುರ್ವಾಸನೆ

ಸೌಮ್ಯ ಆರ್

ಮನೋಹರ್ ಬಳಂಜ ಬೆಳ್ತಂಗಡಿ

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಅರೆಬರೆಯಾಗಿ ನಡೆದಿದ್ದು, ಈ ಸ್ಥಳಗಳಲ್ಲಿ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳಿಗೆ ರಹದಾರಿಯಾಗಿದೆ.

ಕಳೆದ ವರ್ಷ ಆರಂಭವಾದ ಈ ಅಭಿವೃದ್ಧಿ ಕಾಮಗಾರಿ 700 ಕೋಟಿ ರೂ.ಗಿಂತ ಅಧಿಕ ಅನುದಾನದಲ್ಲಿ 35 ಕಿ.ಮೀ ವ್ಯಾಪ್ತಿಯಲ್ಲಿ ಅರೆಬರೆಯಾಗಿ ನಡೆದಿದೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಹಾಕಲಾಗಿದೆ. ಚರಂಡಿಗಳನ್ನು ಮುಚ್ಚಿ ಹಾಕಿ ಹೊಸ ಚರಂಡಿ, ಮೋರಿ ನಿರ್ಮಾಣಕ್ಕೆ ಮುಂದಾಗಿದ್ದರೂ ಎಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. ಚರಂಡಿ, ಮೋರಿ ನಿರ್ಮಾಣಕ್ಕೆ ರಸ್ತೆ ಬದಿಯನ್ನು ಆಳವಾಗಿ ಅಗೆದು ಅಲ್ಲಿ ತಡೆಗೋಡೆ ನಿರ್ಮಾಣ, ಒಂದಿಷ್ಟು ಕಾಂಕ್ರೀಟ್ ಕೆಲಸ ಬಿಟ್ಟರೆ ಇತರ ಕಾಮಗಾರಿಗಳು ನಡೆದಿಲ್ಲ. ಈ ಕಾಮಗಾರಿ ಮಳೆಗೆ ಮುಂಚೆ ಆರಂಭವಾಗಿದ್ದರೂ ಪೂರ್ಣಗೊಳಿಸುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದರು. ಇಂತಹ ಪ್ರದೇಶಗಳಲ್ಲಿ ಸಾಕಷ್ಟು ಮಳೆ ನೀರು ಸಂಗ್ರಹ ಗೊಳ್ಳುವುದರ ಜತೆ ಪೇಟೆ ಪ್ರದೇಶದ ತ್ಯಾಜ್ಯವೂ ನೀರಿನಲ್ಲಿ ಬೆರೆತು ಕೊಳೆತು ನಾರುತ್ತಿದೆ. ಕಳೆದ ಕೆಲ ದಿನಗಳಿಂದ ಬಿಸಿಲಿನ ವಾತಾವರಣ ಇದ್ದು ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆ, ಲಾರ್ವ ಇತ್ಯಾದಿ ಉತ್ಪತ್ತಿಯಾಗತೊಡಗಿದ್ದು ಕೆಲವೆಡೆ ಮೂಗುಮುಚ್ಚಿ ಹೋಗುವ ಪರಿಸ್ಥಿತಿ ಏರ್ಪಟ್ಟಿದೆ.

ಸಾಂಕ್ರಾಮಿಕ ರೋಗ ಭೀತಿ

ಜನನಿಬಿಡ ಹಾಗೂ ಪೇಟೆ, ಶಾಲೆ, ಕಚೇರಿ, ಅಂಗಡಿ ಮೊದಲಾದ ಕಡೆ ಇಂತಹ ಸ್ಥಿತಿ ಇದ್ದು ಇದು ಡೆಂೆಯಂತಹ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಲಿದೆ ಎಂಬ ಆತಂಕ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಸಂಜೆ ವೇಳೆಯಂತೂ ಈ ಪ್ರದೇಶಗಳಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ. ಬದಲಾದ ವಾತಾವರಣದಿಂದ ಜನರಲ್ಲಿ ಜ್ವರ, ಶೀತ, ಗಂಟಲು ನೋವು, ತಲೆನೋವು ಮೊದಲಾದ ಅಸೌಖ್ಯಗಳು ಕಾಣತೊಡಗಿದ್ದು ದವಾಖಾನೆಗಳಲ್ಲಿ ಹೆಚ್ಚಿನ ಸಂದಣಿ ಕಂಡುಬರುತ್ತಿದೆ.

ಹೊಂಡಗಳಿಂದ ಅಪಾಯ

ಡಿಪಿ ಜೈನ್ ಕಂಪನಿಯಿಂದ ಒಳಗುತ್ತಿಗೆ ಪಡೆದ ಮುಗ್ರೋಡಿ ನ್‌ಸ್ಟ್ರಕ್ಷನ್ ಅಗೆದು ಹಾಕಲಾದ ಸ್ಥಳಗಳಲ್ಲಿ ರಸ್ತೆಯನ್ನು ಸುಗಮ ವಾಹನ ಸಂಚಾರಕ್ಕೆ ಯೋಗ್ಯ ಮಾಡಿಕೊಡಲು ಅವಿರತ ಶ್ರಮವಹಿಸುತ್ತಿದೆ. ಆದರೆ ಹೊಸ ಕಾಮಗಾರಿ ಆರಂಭವಾಗಿಲ್ಲ. ಈಗ ಮಳೆ ಕಡಿಮೆಯಾಗುವುದರಿಂದ ಹೊಸ ಕಾಮಗಾರಿ ಆರಂಭವಾಗುವ ನಿರೀಕ್ಷೆ ಜನರಲ್ಲಿ ಇದೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅನೇಕ ಕಡೆ ಹೊಂಡಗಳು ನಿರ್ಮಾಣವಾಗಿರುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಅಗೆದು ಹಾಕಲಾದ ರಸ್ತೆ ಹಾಗೂ ಇನ್ನೊಂದೆಡೆ ಹೊಂಡ-ಗುಂಡಿಗಳನ್ನು ತಪ್ಪಿಸಿ ವಾಹನ ಸವಾರಿ ನಡೆಸುವಲ್ಲಿ ಸವಾರರು ಹೈರಾಣಾಗುತ್ತಿದ್ದಾರೆ. ಗುತ್ತಿಗೆ ಬದಲಾದರೂ ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ.

ಚರಂಡಿ ಕೊಳೆತು ನಾರುತ್ತಿದೆ

ಚರಂಡಿ, ಮೋರಿ ನಿರ್ಮಾಣ ಸ್ಥಳಗಳು ಕೊಳೆತು ನಾರುತ್ತಿವೆ. ಮೂಗು ಮುಚ್ಚಿ ಹೋಗುವ ಸ್ಥಿತಿ, ಹೊಂಡ-ಗುಂಡಿಗಳಲ್ಲಿ ಎದ್ದು ಬಿದ್ದು ಸಾಗುವ ವಾಹನಗಳು, ಅಗಲ ಕಿರಿದಾದ ರಸ್ತೆ ಅಲ್ಲಲ್ಲಿ ಅಗೆದು ಹಾಕಿರುವುದರಿಂದ ಸಂಚಾರಕ್ಕೆ ಹೆಚ್ಚಿದ ಸಮಸ್ಯೆ, ಹೆದ್ದಾರಿಯಿಂದ ಒಳ ರಸ್ತೆಗೆ ಸಂಪರ್ಕ ಪಡೆಯುವಲ್ಲಿ ಹಾಳಾದ ಸಂಪರ್ಕ ರಸ್ತೆ, ಮಳೆ ಬಂದರೆ ಹೆದ್ದಾರಿ ಉದ್ದಕ್ಕೂ ಕೆರೆಯಾಗುವ ರಸ್ತೆ, ರಸ್ತೆಬದಿ ಕೆಸರು ನಿಂತು ಪಾದಚಾರಿಗಳಿಗೂ ಸಮಸ್ಯೆ.

ಉಜಿರೆ ಪ್ರದೇಶದಲ್ಲಿ ಹೆಚ್ಚಿನ ಜನ ವಾಹನ ಸಂಚಾರವಿದೆ. ಇಲ್ಲಿ ಅಲ್ಲಲ್ಲಿ ಚರಂಡಿ ನಿರ್ಮಾಣಕ್ಕೆ ಅಗೆದು ಹಾಕಲಾಗಿದ್ದು ಅಲ್ಲೆಲ್ಲಾ ಕೊಳಕು ನೀರು ತುಂಬಿಕೊಂಡಿದೆ. ಇದು ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಲಿದೆ. - ಹರೀಶ್ ಭಟ್, ಸ್ಥಳೀಯ, ಉಜಿರೆ