ಜಿಲ್ಲೆ

ರಾಜಧಾನಿಯಲ್ಲಿ ಸಣ್ಣ ಮಳೆಗೇ ಬಾಯ್ತೆರೆದ ರಸ್ತೆ ಗುಂಡಿ…!

ಹರೀಶ್​​ ಕೆ.ಸಿ.

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ರಸ್ತೆ ಗುಂಡಿಗಳ ಕಾರುಬಾರು ಶುರುವಾಗಿದೆ. ಇತ್ತೀಚಿಗಷ್ಟೇ ಬಿದ್ದ ಸಣ್ಣ ಪ್ರಮಾಣದ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಬೇಸಿಗೆಯಲ್ಲಿ ರಸ್ತೆ ದುರಸ್ತಿಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಬಿಬಿಎಂಪಿ ವಿಫಲವಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪಾಲಿಕೆ ವ್ಯಾಪ್ತಿಯ 1,344 ಕಿ.ಮೀ.ಉದ್ದದ ಆರ್ಟೀರಿಯಲ್​ ಮತ್ತು ಸಬ್​ ಆರ್ಟೀರಿಯಲ್​ ರಸ್ತೆಗಳಿದ್ದರೆ, 13,638 ಕಿ.ಮೀ.ಉದ್ದದ ವಾರ್ಡ್​ ರಸ್ತೆಗಳಿವೆ. ಪ್ರತಿ ರಸ್ತೆಯಲ್ಲಿ ಕನಿಷ್ಠ ನಾಲ್ಕೆ$ದು ಗುಂಡಿಗಳ ದರ್ಶನವಾಗುತ್ತದೆ. ಅಡ್ಡರಸ್ತೆಗಳು, ಗಲ್ಲಿಗಳಲ್ಲಿನ ಇಕ್ಕಟ್ಟಾದ ಹಾದಿಗಳ ಸ್ಥಿತಿ ತುಂಬಾ ಹದಗೆಟ್ಟಿವೆ. ಪೂರ್ವ ಮುಂಗಾರು ಮಳೆಯಿಂದಾಗಿ ಎನ್​ಎಚ್​ಎಂ ಲೇಔಟ್​ನ ಮೊದಲ ಕ್ರಾಸ್​, ಕಿಲೋರ್ಸ್ಕರ್​ ಲೇಔಟ್​ನ ಮೊದಲ ಮುಖ್ಯ ರಸ್ತೆ, ಗುರುರಾಜ ಲೇಔಟ್​ನ 2ನೇ ಮುಖ್ಯರಸ್ತೆ, ಶೆಟ್ಟಿಹಳ್ಳಿಯ 5ನೇ ಕ್ರಾಸ್​, ಅಶೋಕ ನಗರದ 14ನೇ ಕ್ರಾಸ್​, ತ್ಯಾಗರಾಜನಗರದ ಗಂಗಮ್ಮ ದೇವಸ್ಥಾನದ ಮುಖ್ಯರಸ್ತೆ, ಬಸವನಗುಡಿಯ ಮಾರುಕಟ್ಟೆ ರಸ್ತೆ, ಐಟಿಐ ಲೇಔಟ್​ನ ಜೆಪಿಎನ್​ ಇನ್​ಸ್ಟಿಟ್ಯೂಟ್​ ಮುಂಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ನೈಋತ್ಯ ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇನ್ನಷ್ಟು ರಸ್ತೆ ಗುಂಡಿಗಳು ಕಾಣಿಸಲಿದೆ. ಇದರಿಂದಾಗಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ.

"ಫಿಕ್ಸ್​ ಮೈ ಸ್ಟ್ರೀಟ್​ ಆಪ್​'ನಲ್ಲಿ ನಗರದಾದ್ಯಂತ ಅಪಾಯಕಾರಿ ರಸ್ತೆ ಗುಂಡಿಗಳು ಪತ್ತೆಯಾಗಿವೆ. ಸಾರ್ವಜನಿಕರು ರಸ್ತೆ ಗುಂಡಿಗಳ ಭಾವಚಿತ್ರ ತೆಗೆದು ಈ ಆ್ಯಪ್​ನಲ್ಲಿ ಅಪ್​ಲೋಡ್​ ಮಾಡಿ ಪಾಲಿಕೆ ಗಮನಕ್ಕೆ ತರುತ್ತಿದ್ದಾರೆ. ಆದರೆ, ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿಯಂತೂ "ಅದೇ ರಾಗ ಅದೇ ಹಾಡು' ಎಂಬಂತಾಗಿದೆ. ಅತಿಯಾದ ವಾಹನದಟ್ಟಣೆ ಪ್ರದೇಶ ಎನಿಸಿಕೊಂಡಿರುವ ಪೂರ್ವ ವಲಯ, ಪಶ್ಚಿಮ, ದಕ್ಷಿಣ, ದಾಸರಹಳ್ಳಿ, ಯಲಹಂಕ,ಆರ್​.ಆರ್​.ನಗರ, ಬೊಮ್ಮಾನಹಳ್ಳಿ ಹಾಗೂ ಮಹದೇವಪುರ ಸೇರಿ ಇತರೆ ವಲಯಗಳಲ್ಲಿ ರಸ್ತೆಗುಂಡಿಗಳು ಬಿದ್ದಿವೆ.ಕಳೆದ ವರ್ಷದಲ್ಲೂ ರಸ್ತೆಗುಂಡಿಗಳಿಂದ "ಬೆಂಗಳೂರು ಬ್ರ್ಯಾಂಡ್​​​ಗೆ' ಧಕ್ಕೆ ಉಂಟಾಗಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಉಂಟಾಗುವ ಆತಂಕ ಎದುರಾಗಿದೆ.