ಜಿಲ್ಲೆ

ಅಭಿವೃದ್ಧಿ ಕಾಣದೆ ಹದಗೆಟ್ಟ ರಸ್ತೆ : ಪ್ರತೀ ವರ್ಷವೂ ತಪ್ಪದ ಸಂಕಷ್ಟ : ಬೇಕಿದೆ ಶಾಶ್ವತ ಪರಿಹಾರ

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ಕೆದಂಬಾಡಿ, ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ತ್ಯಾಜರಾಜ-ಓಲ್ತಾಜೆ-ಕಟ್ಟತ್ತಾರು ಗ್ರಾಮೀಣ ಸಂಪರ್ಕ ರಸ್ತೆ ತೀವ್ರವಾಗಿ ಹದಗೆಟ್ಟಿದೆ. ಪ್ರತೀ ವರ್ಷ ರಸ್ತೆಯ ಗುಂಡಿ ಮುಚ್ಚಿ ಸಾಕಾಗಿದೆ. ಶಾಶ್ವತ ಪರಿಹಾರ ನೀಡಿ ಎನ್ನುವುದು ಜನತೆ ಆಗ್ರಹ.

ಪುತ್ತೂರು-ಕುಂಬ್ರ-ಬೆಳ್ಳಾರೆ ರಸ್ತೆಯತ್ಯಾಜರಾಜ ನಗರದಿಂದ ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಮಜ್ಜಾರಡ್ಕ, ಓಲ್ತಾಜೆ, ಗೋಳ್ತಿಲ ಮೂಲಕವಾಗಿ ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಕಟ್ಟತ್ತಾರಿನಲ್ಲಿ ಪುತ್ತೂರು-ಬೆಳ್ಳಾರೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಮಜ್ಜಾರಡ್ಕ, ಓಲ್ತಾಜೆ, ಗೋಳ್ತಿಲ ಭಾಗದ ಜನತೆಗೆ ಪುತ್ತೂರು-ಬೆಳ್ಳಾರೆ ರಸ್ತೆ ಸಂಪರ್ಕದ ಕೊಂಡಿಯಾಗಿದೆ.

ಕಟ್ಟತ್ತಾರು ಶಾಲೆಯಿಂದ ಮುಂದೆ 120 ಮೀಟರ್‌ನಷ್ಟು ಅಂತರದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ಕೆಸರು ತುಂಬಿದ್ದು, ಓಲ್ತಾಜೆ ಭಾಗದಲ್ಲಿ ವಾಹನ, ಜನ ಸಂಚಾರಕ್ಕೂ ಕಷ್ಟಕರ ಎದುರಾಗಿದೆ. ಕಚ್ಚಾ ರಸ್ತೆ ಭಾಗಕ್ಕೆ ಅಳವಡಿಸಿರುವ ಜಲ್ಲಿ ಎದ್ದು ಹೋಗಿದೆ.

ಪುತ್ತೂರು-ಬೆಳ್ಳಾರೆ ಮುಖ್ಯ ರಸ್ತೆಗೆ ( ತ್ಯಾಜರಾಜ ನಗರ, ಕಟ್ಟತ್ತಾರು) ಎರಡೂ ಕಡೆಗಳಲ್ಲಿ ಸಂಪರ್ಕದ ತ್ಯಾಜರಾಜ-ಕಟ್ಟತ್ತಾರು ರಸ್ತೆ ಭಾಗದಲ್ಲಿ ನೂರಾರು ಮನೆಗಳಿವೆ. ಇಲ್ಲಿನ ಮಂದಿಗೆ ಬದಲಿ ರಸ್ತೆ ವ್ಯವಸ್ಥೆ ಇಲ್ಲ. ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ಪರದಾಡುವ ಸ್ಥಿತಿ ಎದುರಾಗುತ್ತಿದೆ.

ಓಲ್ತಾಜೆ ಭಾಗದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವಂತೆ ಕಳೆದ 20 ವರ್ಷಗಳಿಂದ ನಾವು ಜನಪ್ರತಿನಿಧಿಗಳ ಮುಂದೆ ಬೇಡಿಕೆ ಇಡುತ್ತಾ ಬಂದಿದ್ದೇವೆ. ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಓಲ್ತಾಜೆ ಭಾಗದ ಗ್ರಾಮಸ್ಥರು.

ಹೊಂಡ-ಗುಂಡಿಯಿಂದ ಸಂಚಾರಕ್ಕೆ ಸಮಸ್ಯೆ

ತ್ಯಾಗರಾಜ ನಗರದಿಂದ ಮಜ್ಜಾರಡ್ಕದ ಮೂಲಕ ಕಟ್ಟತ್ತಾರು ಸಂಪರ್ಕಿಸುವ ಸುಮಾರು 3 ಕಿ.ಮೀ. ದೂರದ ಅಂತರದ ಈ ರಸ್ತೆಯಲ್ಲಿ ತ್ಯಾಗರಾಜ ನಗರದಿಂದ ಮಜ್ಜಾರಡ್ಕ ಅಂಗನವಾಡಿ ಕೇಂದ್ರದ ತನಕ ಇತ್ತೀಚೆಗೆ ಕಾಂಕ್ರಿಟೀಕರಣಗೊಂಡಿದೆ. ಅಲ್ಲಿಂದ ಮುಂದೆ ಈ ಹಿಂದೆ ಡಾಂಬರೀಕರಣ ಮಾಡಲಾಗಿದ್ದ 200 ಮೀಟರ್ ರಸ್ತೆ ಭಾಗದಲ್ಲಿ ಜಲ್ಲಿಕಲ್ಲು ಮಾತ್ರ ಉಳಿದುಕೊಂಡಿದೆ. ಕಟ್ಟತ್ತಾರು ಜಂಕ್ಷನ್ ಬಳಿಯಿಂದ ಕಟ್ಟತ್ತಾರು ಶಾಲೆ ತನಕದ 100 ಮೀಟರ್‌ನಷ್ಟು ರಸ್ತೆ ಭಾಗ ಕಾಂಕ್ರಿಟೀಕರಣಗೊಂಡಿದೆ. ಅಭಿವೃದ್ಧಿ ಕಾಣದೆ ಕಚ್ಚಾ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.

ಶಾಸಕರಿಗೆ ಗ್ರಾಮಸ್ಥರ ಮನವಿ

ಓಲ್ತಾಜೆ ಭಾಗದಲ್ಲಿ ನೂರಾರು ಮನೆಗಳಿದ್ದು, ಇಲ್ಲಿನ ಮಂದಿ ಕಟ್ಟತ್ತಾರು, ತ್ಯಾಗರಾಜ ನಗರಕ್ಕೆ ಬರಬೇಕಾದರೆ ಇದೇ ರಸ್ತೆ ಅವಲಂಬಿಸಬೇಕಾಗಿದೆ. ಓಲ್ತಾಜೆ ಭಾಗದ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿಕೊಡುವಂತೆ ಇತ್ತೀಚೆಗೆ ಓಲ್ತಾಜೆ, ಮಜ್ಜಾರಡ್ಕ, ಗೋಳ್ತಿಲ ಭಾಗದ ನಾಗರಿಕರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ. ಶಾಸಕರಿಂದ ಸ್ಪಂದನೆ ಸಿಗಬಹುದೆನ್ನುವ ನಿರೀಕ್ಷೆ ಈ ಭಾಗದ ಗ್ರಾಮಸ್ಥರದ್ದಾಗಿದೆ.

ಹದಗೆಟ್ಟ ರಸ್ತೆಯ ಹೊಂಡ-ಗುಂಡಿಗಳನ್ನು ಪ್ರತೀ ವರ್ಷ ಮುಚ್ಚುವ ಮೂಲಕ ಸರಿಪಡಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ. ಆದರೂ ಸಮಸ್ಯೆ ಎದುರಾಗುತ್ತಿದೆ. ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವುದೊಂದೇ ಸಮಸ್ಯೆಗೆ ಶಾಶ್ವತ ಪರಿಹಾರ. ಈ ಬಾರಿ ಸಮಸ್ಯೆ ಬಗ್ಗೆ ನಾವು ಮನವಿ ಸಲ್ಲಿಸಿದ್ದೇವೆ. ಶಾಸಕರು, ಗ್ರಾಪಂ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ. ಭರತ್ ಓಲ್ತಾಜೆ ಸ್ಥಳೀಯ ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹದಗೆಟ್ಟ ರಸ್ತೆ ಭಾಗಕ್ಕೆ ಜಲ್ಲಿ ಅಳವಡಿಸಿ ತುರ್ತು ದುರಸ್ತಿ ಕಾರ್ಯ ನಡೆಸಲಾಗುವುದು. ಈ ರಸ್ತೆಯ ಅಭಿವೃದ್ಧಿಗಾಗಿ ಅರಿಯಡ್ಕ ಗ್ರಾಪಂ ವತಿಯಿಂದ 4 ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ. ಮಳೆ ಕಡಿಮೆಯಾದ ಬಳಿಕ ಕಾಮಗಾರಿ ನಡೆಸಲಾಗುವುದು. ಸಂತೋಷ್ ಮಣಿಯಾಣಿ ಕುತ್ಯಾಡಿ ಅರಿಯಡ್ಕ ಗ್ರಾಪಂ ಅಧ್ಯಕ್ಷ ಕಟ್ಟತ್ತಾರು ಜಂಕ್ಷನ್ ಬಳಿಯಿಂದ ಕಟ್ಟತ್ತಾರು ಶಾಲಾ ವಠಾರದ ತನಕದ ರಸ್ತೆಯನ್ನು ಈ ಹಿಂದಿನ ಶಾಸಕ ಸಂಜೀವ ಮಠಂದೂರು ನೀಡಿರುವ 5 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಉಳಿದ ರಸ್ತೆ ಭಾಗಕ್ಕೆ ಜಲ್ಲಿ ಅಳವಡಿಸಲಾಗಿದೆ. ಗೋಳ್ತಿಲ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಶರತ್ ಕುಮಾರ್ ಮಾಡಾವು ಕೆಯ್ಯೂರು ಗ್ರಾಪಂ ಅಧ್ಯಕ್ಷ