ಕೂಡ್ಲಿಗಿ: ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.
ಪಟ್ಟಣದ ಪಪಂ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿ, ಪಟ್ಟಣದ 20 ವಾರ್ಡ್‌ಗಳಲ್ಲಿ ಬೇಕಾಗಿರುವ ಸೌಲಭ್ಯಗಳನ್ನು ಪಟ್ಟಿಮಾಡಿ ಹಂತ ಹಂತವಾಗಿ ಬಗೆಹರಿಸಲಾಗುವುದು.
ಈಗಾಗಲೇ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಸುಂದರ ಹಾಗೂ ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಹಲವು ಕಾರ್ಯ ಯೋಜನೆಗಳನ್ನು ತಯಾರಿಸಿದ್ದು, ಅದರ ಮೂಲಕ ಪಪಂ ವ್ಯಾಪ್ತಿಯ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು.
ಕುಡಿಯುವ ನೀರು, ವಸತಿ, ಬೀದಿ ದೀಪ, ರಸ್ತೆ, ಚರಂಡಿ ವ್ಯವಸ್ಥೆ ಸೇರಿ ಸುಂದರ ಹಾಗೂ ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರ ದೂರಿನಂತೆ ಪಪಂ ಕಚೇರಿಯಲ್ಲಿ ಹಕ್ಕುಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ನೀಡಲು ವೃಥಾ ಅಲೆದಾಡಿಸುತ್ತಾರೆ ಎನ್ನುವ ಕೆಲ ದೂರುಗಳು ಬಂದಿದ್ದು, ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಉಪಾಧ್ಯಕ್ಷೆ, ಸರ್ವ ಸದಸ್ಯರ ಸಮನ್ವಯದಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಶಾಸಕರು ಈಗಾಗಲೇ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅಂದಾಜು 3 ಕೋಟಿ ರೂ. ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಇದನ್ನು ಓದಿ: ರಸ್ತೆ ವಿಸ್ತರಣೆಗಾಗಿ ಮೈಲಸಂದ್ರ ಕೆರೆಗೆ ಮಣ್ಣ !
ಸಾರ್ವಜನಿಕರ ಅಹವಾಲುಗಳು ಏನೇ ಇದ್ದರು ಖುದ್ದು ಕಚೇರಿಗೆ ಬಂದು ಭೇಟಿ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಾಗಿ ಭರವಸೆ ನೀಡಿದರು. ಸಂಸದ ಈ.ತುಕಾರಾಂ ಅವರು ಪಟ್ಟಣದ ಸಂಡೂರು ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡಲು ಕಾರ್ಯ ಯೋಜನೆ ರೂಪಿಸಲು ತಿಳಿಸಿದ್ದು, ಶೀಘ್ರದಲ್ಲೇ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಪಪಂ ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ, ಸದಸ್ಯ ಸಯ್ಯದ್ ಶುಕೂರ್, ಮುಖ್ಯಾಧಿಕಾರಿ ಎಂ.ಕೆ.ಮುಗುಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಸುರೇಶ, ಸದಸ್ಯರಾದ ಬಾಸೂ ನಾಯ್ಕ, ಕೆ.ಈಶಪ್ಪ, ಡಿ.ಎಚ್.ದುರುಗೇಶ, ನಲ್ಲಮುತ್ತಿ ದುರುಗೇಶ, ಕೊತ್ಲೇಶ, ಉದಯ ಜನ್ನು, ಡಾಣಿ ರಾಘವೇಂದ್ರ, ಸಣ್ಣ ಕೊತ್ಲಪ್ಪ, ಸಿ.ಬಿ.ಜಯರಾಂ ನಾಯಕ, ವೆಂಕಟೇಶ, ಬೇಕರಿ ಮಹೇಶ, ಸಿ.ಬಿ.ಸಿದ್ದೇಶ, ಕುಮಾರಸ್ವಾಮಿ, ಎನ್.ಗಂಗಾಧರ ಇತರರಿದ್ದರು.