ಆಲೂರು ಗುಂಡೂಬಳಿ ನಿರ್ಮಿಸಿದ ಅಣೆಕಟ್ಟೆ ತಳಭಾಗದಲ್ಲಿ ಹರಿವು ನಿಲ್ಲಿಸಿದ ಸೌಪರ್ಣಿಕಾ ನದಿ. 
ಜಿಲ್ಲೆ

ಹರಿವು ನಿಲ್ಲಿಸಿದ ನದಿಗಳು

Avinash R

-ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಹಿತಮಿತವಿಲ್ಲದ ಬಳಕೆ, ಅವೈಜ್ಞಾನಿಕ ಅಣೆಕಟ್ಟೆಗಳು, ಹಡಿಲು ಬಿದ್ದ ಭತ್ತದ ಗದ್ದೆಗಳು, ಮರುಪೂರಣ ಕುರಿತು ಅಸಡ್ಡೆ, ಘಟ್ಟದ ಅಂಚು, ಮಳೆಕಾಡು, ನೀರಿನ ಅಕ್ಷಯ ಪಾತ್ರೆಗಳಾದ ಬೆಟ್ಟಗುಡ್ಡಗಳ ಕಣ್ಮರೆಯಿಂದ ನದಿಗಳ ಹರಿವು ನಿಂತಿದೆ. ಬಿರುಬೇಸಿಗೆಯಲ್ಲಿ ನದಿಪಾತ್ರಗಳ ನೀರಿನ ಸೆಲೆ ಬತ್ತಿ ನಾವು ಪರ್ಜನ್ಯ ಜಪ, ಕಪ್ಪೆ, ಕತ್ತೆಗಳ ಮದುವೆ ಮಾಡುವ ಮೌಢ್ಯಕ್ಕೆ ಶರಣಾಗುವ ಹಂತ ಮುಟ್ಟಿಯಾಗಿದೆ.

ಸಾವೆಹಕ್ಲು ಅಣೆಕಟ್ಟೆ ಕಟ್ಟಿ ಚಕ್ರಾ ನದಿ ಹರಿವಿಗೆ ಮೊದಲ ಮೊಳೆ ಹೊಡೆಯಲಾಗಿದೆ. ಉದ್ದಾನುದ್ದಕ್ಕೂ ಯಂತ್ರ ಬಳಸಿ ಅನಿಯಮಿತವಾಗಿ ನೀರೆತ್ತಿದ ಪರಿಣಾಮ ಚಕ್ರಾ ನದಿ ಮರಳುಗಾಡಿನಂತಾಗಿದೆ. ಹೊಂಡ ತೆಗೆದು ನೀರು ಬಸಿದ ಪರಿಣಾಮ ನದಿ ತೆವಳುವುದಕ್ಕೂ ಅಗದೆ ಸಾಯುತ್ತಿದೆ. ಸೌಪರ್ಣಿಕಾ ಏತನೀರಾವರಿ ಯೋಜನೆಯ ವೇಸ್ಟ್ ಆಗುವ ನೀರು ಉಳಿಸಿಕೊಂಡಿದ್ದರೆ ಹೊಳೆಯ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿತ್ತು. ಸೌಪರ್ಣಿಕಾ ನದಿಯ ಹರಿವು ನಿಲ್ಲಿಸಿದ ಹೆಚ್ಚುಗಾರಿಕೆ ವಾರಾಹಿ ನೀರಾವರಿ ಇಲಾಖೆಗೆ ಸಲ್ಲುತ್ತದೆ. ಕುಬ್ಜ ಇರಬಹುದು, ಖೇಟಿಕ ಇರಬಹುದು ಎಲ್ಲ ನದಿಗಳದ್ದು ಇದೇ ಕತೆ.

ವಾರಾಹಿ ನದಿ ಇನ್ನೂ ಹರಿವು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ ವಿದ್ಯುತ್ ಉತ್ಪಾದನೆ. ಮಳೆಗಾಲದ ಅಷ್ಟೂ ನೀರು ಹಿಡಿದಿಟ್ಟು ವಿದ್ಯುತ್ ಉತ್ಪಾದನೆಗಾಗಿ ನೀರು ಅಣೆಕಟ್ಟೆಯಿಂದ ಬಿಡುವುದರಿಂದ ನದಿ ಬತ್ತಿಲ್ಲ. ಇಲ್ಲದಿದ್ದರೆ ಕುಂದಾಪುರ ತಾಲೂಕು ಪಂಚ ನದಿಗಳಿದ್ದರೂ ಹನಿ ನೀರಿಗೂ ತತ್ವಾರ ಪಡಬೇಕಾಗುತ್ತಿತ್ತು.

ಅಕ್ರಮ ಪಂಪ್‌ಸೆಟ್ ಜೋಡಿಸಿ ನೀರು ಪೂರೈಕೆ ಮಾಡಿಕೊಳ್ಳುವ ದೃಶ್ಯ ನದಿ ಪಾತ್ರದ ಉದ್ದಾನುದ್ದಕ್ಕೂ ಕಂಡುಬರುತ್ತದೆ.

ನದಿಗಳ ಹರಿವು ನಿಂತಿರುವ ಬಗ್ಗೆ ಯಾರೂ ಗಂಭೀರವಾಗಿ ಚಿಂತಿಸುತ್ತಿಲ್ಲ ಎನ್ನೋದು ನೀರಿನ ಬಗ್ಗೆ ಇರುವ ನಿರ್ಲಕ್ಷೃಕ್ಕೆ ಸಾಕ್ಷಿ. ಹಾಗಂತ ಜಿಲ್ಲಾಡಳಿತ ಸುಮ್ಮನೆ ಕೂತಿಲ್ಲ. ನೀರಿನ ಬಗ್ಗೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ, ಟ್ಯಾಂಕರ್ ನೀರು ಪೂರೈಕೆ ಮಾಡುತ್ತೇವೆ ಎಂದು ತೀರ್ಮಾನ ತೆಗೆದುಕೊಳ್ಳುವುದು ಬಿಟ್ಟರೆ ನೀರೆಲ್ಲಿಂದ ಎನ್ನೋದಕ್ಕೆ ಅವರ ಬಳಿಯೂ ಉತ್ತರ ಸಿಗೋದಿಲ್ಲ. ನದಿಗಳು ಹರಿವು ನಿಲ್ಲಿಸಿರುವುದು ತಾತ್ಸಾರ ಮಾಡುವ ವಿಷಯವಲ್ಲ. ಗಂಭೀರವಾಗಿ ಪರಿಗಣಿಸದಿದ್ದರೆ ಕರಾವಳಿ ತೀರದಲ್ಲಿ ಕೃಷಿಗೆ ಬಿಡಿ ಕುಡಿಯಲು ಬಾಟ್ಲಿ ನೀರು ಆಶ್ರಯಿಸಬೇಕಾಗುತ್ತದೆ.

ಸೌಪರ್ಣಿಕಾ ನದಿ ಅಣೆಕಟ್ಟೆ ಮೇಲ್ಬಾಗದ ದೃಶ್ಯ.

ಉಚಿತ ವಿದ್ಯುತ್ ನದಿಗೆ ಶಾಪ

ಚಕ್ರಾ ನದಿಗೆ ಕಬ್ಬಿನಾಲೆ ಹಾಗೂ ಶೆಟ್ಟಿಪಾಲ ಬಳಿ ಎರಡು ಕಿಂಡಿ ಅಣೆಕಟ್ಟೆ ಕಟ್ಟಿದ್ದು, ಈ ಪರಿಸರದಲ್ಲೇ 25ಕ್ಕೂ ಮಿಕ್ಕಿದ ಮೋಟಾರ್ ಇದೆ. ಶೆಟ್ಟಿಪಾಲು ಕಿಂಡಿ ಅಣೆಕಟ್ಟೆ ಹಿನ್ನೀರು ವಾಣಿಜ್ಯ ಬೆಳೆಗಾರರ ರಕ್ಷಣೆಗಾಗಿ ಒತ್ತಡಕ್ಕೆ ಮಣಿದು ಮಾಡಿದ್ದು. ಅಡಕೆ ತೋಟ ಬಿಟ್ಟರೆ ಮತ್ತಾವ ಕೃಷಿಗೂ ನೀರಿಲ್ಲ. ಕೃಷಿಕರಿಗೆ ಉಚಿತ ವಿದ್ಯುತ್ ನೀಡಿದ ನಂತರ ಮೋಟಾರುಗಳ ಸಂಖ್ಯೆಗೆ ಹಿಡಿತವೇ ಇಲ್ಲ. ಚಕ್ರಾ ನದಿಯ ಮಗ್ಗುಲಲ್ಲಿರುವ ಅಡಕೆ ತೋಟಗಳಲ್ಲಿ ಒಮ್ಮೆ ಸಂಚಾರ ಮಾಡಿದರೆ ಗೊತ್ತಾಗುತ್ತದೆ ನೀರಿನ ದುರ್ಬಳಕೆ ಎಷ್ಟು ಎನ್ನೋದು. ಆದರೆ ಉಡುಪಿ ಡಿಸಿಯಾಗಿದ್ದ ಜಿ.ಜಗದೀಶ್ ಆವರು ಚಕ್ರಾ ನದಿಯ ನೀರು ಬಳಕೆಗೆ ಕಡಿವಾಣ ಹಾಕಿದ್ದರಿಂದ ಮಳೆಗಾಲದ ತನಕ ನದಿ ಬತ್ತಿರಲಿಲ್ಲ.

ನದಿ ಹರಿವು ನಿಲ್ಲಿಸಿದರೆ ಮಣ್ಣಿನೊಟ್ಟಿಗೆ ಬದುಕಿ, ಭೂಮಿಗೆ ಬೇಕಾಗುವ ಪೋಷಕಾಂಶ ನೀಡುವ ಅತ್ಯಂತ ಸೂಕ್ಷ್ಮ ಜೀವಿಗಳನ್ನು ಕಳೆದುಕೊಂಡು ಭೂಮಿ ಬರಡಾಗಿಸುತ್ತದೆ. ಕಳೆದುಕೊಂಡು ಅತ್ಯಮೂಲ್ಯ ಜೀವಿಗಳ ಕೃತಕ ಸೃಷ್ಟಿ ಅಸಾಧ್ಯ. ನದಿ, ಹೊಳೆ, ಮದಗ ಕೆರೆಗಳು ನೀರಿನ ಮೂಲವಾಗಿದ್ದು, ಕರಾವಳಿ ಜಿಲ್ಲೆಯ ಅಕ್ಷಯ ಪಾತ್ರೆಗಳು. ಮದಗ, ಕೆರೆಗಳು ಹೂಳು ತುಂಬಿ, ನೀರಿನ ಒರತೆ ಬತ್ತಿಸಿ, ಒಣಗಿದರೆ, ಹೊಳೆಗಳ ಹರಿವು ನಿಂತರೆ ಬೆಲೆಕಟ್ಟಲಾಗದ ಸೂಕ್ಷ್ಮಜೀವಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಭತ್ತದ ಕೃಷಿ ಲಾಭದಾಯವಲ್ಲ ಎಂದು ಭೂಮಿ ಹಡಿಲು ಬಿಡುವುದು ಅಂತರ್ಜಲ ಮಟ್ಟ ಕುಸಿಯುವಂತೆ ಮಾಡಿದೆ.-ರಾಘವೇಂದ್ರ ಭಟ್, ಕೃಷಿಕ, ಭಟ್ರತೋಟ, ಪಡುಕೋಣೆ
ಮಣ್ಣಿನ ಸವಕಳಿ, ಬೆಟ್ಟಗುಡ್ಡ, ಸ್ವಾಭಾವಿಕ ಮಳೆ ಕಾಡುಗಳ ಕಣ್ಮರೆ, ಜನ ಸಾಂದ್ರತೆ ಹೆಚ್ಚಳ, ಬಹುಮಡಿ ಕಟ್ಟಡಗಳು, ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿ ನೀರಿನ ಸಮಸ್ಯೆಗೆ ಕಾರಣವಾಗುತ್ತದೆ. ಕೆರೆಗಳ ಸಂಖ್ಯೆ ವಿರಳವಾಗಿರುವುದು, ಸಸ್ಯ ಸಹಜ ಮಳೆ, ಮಳೆಗೆ ಪೂರಕವಾದ ಅರಣ್ಯೀಕರಣ ಕೊರತೆ ನದಿಗಳ ಹರಿವು ನಿಲ್ಲಿಸುತ್ತದೆ. ಹಿಂದೆ ಹೊಳೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇರುತ್ತಿದ್ದವು, ಮಣ್ಣಿನ ಸವಕಳಿಗೆ ಗುಂಡಿಗಳನ್ನು ಮುಚ್ಚಿ ನದಿಪಾತ್ರವನ್ನು ಸಮತಟ್ಟು ಮಾಡಿರುವುದು ಜಲಮಟ್ಟ ಕುಸಿತಕ್ಕೆ ಕಾರಣ. ಕರಾವಳಿಯಲ್ಲಿ ಒಂದು ಎಕರೆ ಜಾಗದಲ್ಲಿ 1-1.25 ಕೋಟಿ ಲೀಟರ್ ಮಳೆ ಸುರಿಂದರೂ ಬಳಕೆಯಾಗುವುದು ಶೇ.10ರಷ್ಟು ನೀರು. ಇದೊಂದು ಗಂಭೀರವಾಗಿ ಚಿಂತಿಸಬೇಕಾದ ವಿಚಾರ.-ಶಿವಾನಂದ ಕಳವೆ, ಪರಿಸರ ಚಿಂತಕ, ಕಳವೆ ಯಲ್ಲಾಪುರ