ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್ ನಂ.2 ರಲ್ಲಿ ದಾಂಧಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ನಗರಸಭೆ ಸದಸ್ಯರಾದ ಕೆ.ರಾಜಶೇಖರ, ಕೆ.ಹನುಮೇಶ ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದ, ಕ್ಯಾಂಪ್ ನಿವಾಸಿಗಳಾದ ಸುನೀಲ್ ಮೇಸ್ತ್ರ, ಪ್ರಸನ್ನ ರಫ್ತಾನ್, ಕೌಸಿಕ್ ಕೆ.ಮಂಡಲ, ದೇವರಾಜ ರಾಯ್ ಇದ್ದರು. 
ಜಿಲ್ಲೆ

ಆರ್‌ಎಚ್ ಕ್ಯಾಂಪ್‌ನಲ್ಲಿ ದಾಂಧಲೆ ನಡೆಸಿದವರ ಬಂಧಿಸಿ

ಸಿಂಧನೂರು: ತಾಲೂಕಿನ ಆರ್.ಎಚ್ ಕ್ಯಾಂಪ್ ನಂ.2 ರಲ್ಲಿರುವ ದುರ್ಗಾದೇವಿ ದೇವಸ್ಥಾನದ ಬಳಿ ಕೆಲವರು ಭಾನುವಾರ ಸಂಜೆ ನಮಾಜ್ ಮಾಡಿ, ಅಲ್ಲಿದ್ದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಕ್ಯಾಂಪ್ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಕೆಲವರು ದುರ್ಗಾದೇವಿ ದೇವಸ್ಥಾನದೊಳಗೆ ನುಗ್ಗಲು ಯತ್ನಿಸಿದ್ದಲ್ಲದೆ ನಮಾಜ್ ಮಾಡಿದ್ದಾರೆ. ಅದನ್ನು ತಡೆಯಲು ಹೋದ ಹೆಂಗಸರ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳೆಯರನ್ನು ರಕ್ಷಿಸಲು ಬಂದವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಕ್ಯಾಂಪ್‌ನಲ್ಲಿ ಶಾಂತಿ ಕದಡುವ ಯತ್ನ ನಡೆಸಲಾಗಿದೆ ಎಂದು ದೂರಿದರು.

ದುಷ್ಕರ್ಮಿಗಳನ್ನು ಬಂಧಿಸಿ

ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ನಾಲ್ಕು ಜನ ದುಷ್ಕರ್ಮಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಕ್ಯಾಂಪ್‌ನಲ್ಲಿ ಶಾಂತಿ ಕಾಪಾಡಬೇಕು. ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಯುವತಿಯೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಚುಡಾಯಿಸಿ, ಅವಾಚ್ಯವಾಗಿ ನಿಂದಿಸಲಾಗಿದೆ. ಇದರಿಂದ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಹೆದರುತ್ತಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಈರೇಶ ಇಲ್ಲೂರು, ರವಿ ಉಪ್ಪಾರ, ಕಮಲೇಶ, ಅಭಿಷೇಕ, ಕಿಶೋರ್, ಗೊಲಾಕ್ ಬಿಸ್ವಾಸ್, ಕೃಷ್ಣ ಸರ್ಕಾರ್, ಗೋಪಾಲ ಸರ್ಕಾರ್, ಸೂರಿ, ಸುದಾವ್, ಪ್ರದೀಪ್, ಸುರೇಶ ಸಿದ್ದಾಪುರ ಇತರರಿದ್ದರು.