ಜಿಲ್ಲೆ

ಕುಕ್ಕೆ ಸ್ನಾನಘಟ್ಟದಲ್ಲಿ ರಕ್ಷಣಾ ಕ್ರಮ ಪರಿಶೀಲನೆ : ಭಕ್ತರು ನೀರಿಗಿಳಿಯದಂತೆ ಮನವಿ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಅಪಾಯಮಟ್ಟ ಮೀರಿ ಹರಿಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಸ್ನಾನಘಟ್ಟಕ್ಕೆ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಮಂಗಳವಾರ ಭೇಟಿ ನೀಡಿ ದೇವಳದ ವತಿಯಿಂದ ಕೈಗೊಂಡ ಮುಂಜಾಗ್ರತಾ ಹಾಗೂ ರಕ್ಷಣಾ ಕ್ರಮ ಪರಿಶೀಲಿಸಿದರು.

ಬಳಿಕ ಮಾತನಾಡಿ, ದೇವಳದ ವತಿಯಿಂದ ನದಿಯ ಸ್ನಾನಘಟ್ಟದಲ್ಲಿ 24 ಗಂಟೆಯೂ ಕಾವಲು ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಸೂಚಿಸಿದ್ದೇವೆ. ಈ ಸಂದರ್ಭ ಭಕ್ತರು ನದಿಗೆ ಇಳಿಯುವ ದುಸ್ಸಾಹಸ ಮಾಡಬಾರದು. ಡ್ರಮ್‌ಗಳಲ್ಲಿ ಸಂಗ್ರಹಿಸಿಟ್ಟ ನದಿಯ ತೀರ್ಥ ಸ್ನಾನ ಮಾಡಲು ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.

ಭದ್ರತಾ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಅವಶ್ಯಕತೆ ಇರುವ ವ್ಯವಸ್ಥೆಗಳ ಕುರಿತು ಹರೀಶ್ ಇಂಜಾಡಿ ಮಾಹಿತಿ ಪಡೆದುಕೊಂಡರು. ದೇವಳದ ಇಂಜಿನಿಯರ್ ಉದಯಕುಮಾರ್, ಆರೋಗ್ಯ ನಿರೀಕ್ಷಕ ಯೋಗೀಶ್‌ಎಂ.ವಿಟ್ಲ, ಅಭಿಯಂತ ಚೇತನ್, ಭದ್ರತಾ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

ಮಂಗಳವಾರವೂ ಸ್ನಾನಘಟ್ಟ ಮುಳುಗಡೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಸ್ನಾನಘಟ್ಟ, ದೇವರ ಜಳಕದ ಕಟ್ಟೆ, ಶೌಚಾಗೃಹ, ಡ್ರೆಸ್ಸಿಂಗ್ ಕೊಠಡಿಗಳು ಜಲಾವೃತವಾಗಿವೆ. ಜತೆಗೆ ಕುಮಾರಧಾರ ಉಪನದಿ ದರ್ಪಣತೀರ್ಥ ಕೂಡ ತುಂಬಿ ಹರಿಯುತ್ತಿದೆ.