ಹೂವಿನಹಡಗಲಿ: ಕೇಂದ್ರ ಸರ್ಕಾರದ 8ನೇ ವೇತನ ಆಯೋಗದ ವರದಿಯ ಶಿಫಾರಸಿನ ಅನ್ವಯ ನಿವೃತ್ತ ನೌಕರರಿಗೆ ಪಿಂಚಣಿ ಮತ್ತು ಅವರ ಕುಟುಂಬದವರ ಪಿಂಚಣಿ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿ ನಿವೃತ್ತ ನೌಕರರ ಸಂಘದಿಂದ ತಹಸಿಲ್ ಕಚೇರಿ ಶಿರಸ್ತೇದಾರ್ ಸಲೀಂ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಅಂತೂ ಸಿಕ್ತು ನಿರಾಶ್ರಿತರ ಕೇಂದ್ರಕ್ಕೆ ರಸ್ತೆ!
ಸಂಘದ ತಾಲೂಕು ಅಧ್ಯಕ್ಷ ಜಿ.ಬಸವರಾಜಪ್ಪ ಮಾತನಾಡಿ, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚಿಸಿದೆ.
2026 ಏ.1ಕ್ಕಿಂತ ಮುಂಚೆ ನಿವೃತ್ತರಾದವರಿಗೆ ಪಿಂಚಣಿ ಪರಿಷ್ಕರಣೆ ಸಾಧ್ಯವಿಲ್ಲವೆಂದು, ಕೇಂದ್ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದರಿಂದಾಗಿ ಇದಕ್ಕೂ ಮುಂಚಿತವಾಗಿ ನಿವೃತ್ತರಾದ ನೌಕರರು ಆರ್ಥಿಕ ಸಂಕಷ್ಟ ಎದಿರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. 2026 ಏ.1ಕ್ಕಿಂತ ಮುಂಚೆ ನಿವೃತ್ತಿಯಾದ ನೌಕರರಿಗೂ 8ನೇ ವೇತನ ಆಯೋಗದ ಶಿಫಾರಸಿನಂತೆ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಸೈಯ್ಯದ್ ಹುಸೇನ್ ಸಾಬ್, ಸದಸ್ಯರಾದ ವೈ.ಮಂಜುನಾಥ, ದೇವೇಂದ್ರನಾಯ್ಕ, ದ್ಯಾಮಜ್ಜ, ಎ.ಚನ್ನಬಸಪ್ಪ, ನಿಂಗಪ್ಪ, ಸಿ.ಚನ್ನಬಸಪ್ಪ ಇತರರಿದ್ದರು.