ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿ, ಕಥೆಗಾರ-ಅಂಕಣಕಾರ ಸಣ್ಣಪ್ಪ ಫಕೀರಪ್ಪ ಯೋಗಪ್ಪನವರ್ (73) ಅವರು ಇಂದು ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬೆಂಗಳೂರಿನ ಗಂಗಾನಗರ ನಿವಾಸಿ ಯೋಗಪ್ಪನವರ್ ಹಾಗೂ ಅವರ ಪತ್ನಿ ಇಬ್ಬರೂ ಕೆಲದಿನಗಳ ಹಿಂದೆ ಕರೊನಾ ಸೋಂಕಿಗೆ ಒಳಗಾಗಿದ್ದರು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪತ್ನಿ ಸೋಂಕಿನಿಂದ ಗುಣಮುಖರಾಗಿ ಚೇತರಿಸಿಕೊಂಡು ನಾಲ್ಕು ದಿನಗಳ ಹಿಂದಷ್ಟೇ ಮನೆಗೆ ಮರಳಿದ್ದರು. ಆದರೆ ಗಂಭೀರ ರೋಗಲಕ್ಷಣಗಳಿಂದ ಬಳಲುತ್ತಿದ್ದ ಯೋಗಪ್ಪನವರ್ ಇಂದು ಕೊನೆಯುಸಿರೆಳೆದರು.
ಬಾಗಲಕೋಟೆ ಬಸವೇಶ್ವರ ಕಾಲೇಜಿನಲ್ಲಿ ಪದವಿ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದ ಯೋಗಪ್ಪನವರ್, ಆರಂಭದಲ್ಲಿ ಬಾದಾಮಿ ವೀರಪುಲಿಕೇಶಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ನಂತರ ಕೆಎಎಸ್ ಮಾಡಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ವೃತ್ತಿ ಜತೆಗೆ ಬರವಣಿಗೆಯನ್ನೂ ಪ್ರವೃತ್ತಿ ಆಗಿಸಿಕೊಂಡು ಕಥೆಗಾರರಾಗಿ ಗುರುತಿಸಿಕೊಂಡಿದ್ದರು.
ಮ್ಯುಟೇಷನ್, ಮಾತು ಮೀರಿದ ಮಿಂಚು, ನೀಲು ಮುಂತಾದ ಕೃತಿಗಳನ್ನು ರಚಿಸಿದ್ದ ಇವರು ಕೆಲವು ಕಾದಂಬರಿಗಳನ್ನೂ ರಚಿಸಿದ್ದು, ಅಂಕಣಕಾರರಾಗಿಯೂ ತೊಡಗಿಸಿಕೊಂಡಿದ್ದರು. ಮೃತರ ಅಂತಿಮ ಸಂಸ್ಕಾರ ಅವರ ಹುಟ್ಟೂರಾದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.