ಜಿಲ್ಲೆ

ಹಿಂದೆ ಒಂದು ಪಕ್ಷ ಲೋಕಾಯುಕ್ತ ಅಧಿಕಾರವನ್ನೇ ಕಿತ್ತುಕೊಳ್ತು: ಸಂತೋಷ್​ ಹೆಗ್ಡೆ

ಮಂಡ್ಯ: ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು, ಎಲ್ಲರೂ ಜನ ಸೇವೆಯ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯದಲ್ಲಿ ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ ವಿಚಾರ ಸಂಕೀರ್ಣವನ್ನು ಉದ್ಧೇಶಿಸಿ ಮಾತನಾಡುವ ವೇಳೆ ಜನಪ್ರತಿನಿಧಿಗಳಲ್ಲಿ ಹುದ್ದೆಯ ಲಾಭಕ್ಕಿಂತ ಸೇವೆ ಮಾಡುವ ವಿಚಾರ ಮೂಡಬೇಕು. ರಾಜಕೀಯ ಪಕ್ಷಗಳಷ್ಟೇ ಅಲ್ಲದೆ ಸಾರ್ವಜನಿಕರು ಈ ಬಗ್ಗೆ ಚಿಂತಿಸಬೇಕಿದೆ. ಜಾತಿ, ಧರ್ಮ, ಮತ ಎನ್ನದೆ ದೇಶ ಸೇವೆ ಮಾಡುವವರಿಗೆ ಜನತೆ ಮತ ಹಾಕಬೇಕು ಎಂದು ಹೇಳಿದ್ಧಾರೆ.

ಲಂಚ ಕೊಟ್ಟಂತೆ

ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಗಳ ಕುರಿತು ಮಾತನಾಡಿದ ಸಂತೋಷ್​ ಹೆಗ್ಡೆ ಈ ಫ್ರೀ ಯೋಜನೆಯ ಪರಿಣಾಮ ಮುಂದಿನ ಆರು ತಿಂಗಳೊಳಗೆ ತಿಳಿಯುತ್ತದೆ. ಮಹಿಳೆಯರು ಒಂದು ಬಸ್​ನಲ್ಲಿ ಹೊರಟರೆ ಗಂಡಸರು ಮತ್ತೊಂದು ವಾಹನದಲ್ಲಿ ತೆರಳುತ್ತಿದ್ದಾರೆ. ಅತ್ತೆ-ಸೊಸೆ ನಡುವೆ ಜಗಳವಾಗಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಈಗಾಗಲೇ ವಿದ್ಯುತ್​ ಬಿಲ್​ ಏರಿಕೆ ಮಾಡಲಾಗಿದ್ದು, ಉತ್ಪಾದನೆ ಕಡಿಮೆ ಆಗಿದೆ.

ಈ ರೀತಿ ಉಚಿತ ಯೋಜನೆಗಳನ್ನು ಘೋಷಿಸುವುದು ನನ್ನ ಪ್ರಕಾರ ಲಂಚ ಕೊಟ್ಟಂತೆ. ಇದರ ಪರಿಣಾಮ ಮುಂದಿನ ಆರು ತಿಂಗಳೊಳಗೆ ಜನತೆಗೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಹಿಂದಿನ ಸರ್ಕಾರದ ಭ್ರಷ್ಟಾಚಾರ ತನಿಖೆ ಕುರಿತು ಮಾತನಾಡಿ ಈ ರೀತಿ ಹೇಳುವುದು ಸಹಜ. ಆಧರೆ, ನಂತರ ತನಿಖೆಯು ನಡೆಯುವುದಿಲ್ಲ ಸಲ್ಲಿಸಲಾದ ವರದಿ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ. ಇದು ಜನರನ್ನು ಮಂಕುಗೊಳಸುವ ಯತ್ನ. ಇಂತಹ ಮಾತುಗಳನ್ನು ಆಡುವ ಬದಲು ಪೂರೈಸಬೇಕು. ಇವರುಗಳು ಕೊಟ್ಟ ಮಾತಿನಂತೆ ಎಲ್ಲವನ್ನೂ ಪೂರೈಸಬೇಕು.

ಬದಲಾಗಬೇಕಿರುವುದು ಮತದಾರನಿಂದ

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಅಕ್ಕಿ ಬದಲು ಹಣ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ ನನ್ನ ಪ್ರಕಾರ ಇದು ತಪ್ಪು. ಯಾವತ್ತು ಶ್ರಮದಿಂದ ಹಣ ಪಡೆಯಬೇಕು ದಾನದಿಂದ ಪಡೆಯುವುದು ಸರಿಯಲ್ಲ. ವಿದ್ಯೆ, ಆರೋಗ್ಯ ನೀಡೋದು ಸರ್ಕಾರದ ಜವಾಬ್ದಾರಿ. ಅದನ್ನು ಅವರು ನಿಭಾಯಿಸಲಿ. ಸರ್ಕಾರಿ ಶಾಲೆ, ಆಸ್ಪತ್ರೆಯ ಸೌಲಭ್ಯಗಳನ್ನ ಜಾಸ್ತಿ ಮಾಡಲಿ. ಮತದಾರಿಗೆ ಆಮಿಷವೊಡ್ಡೋದು ಚುನಾವಣಾ ಕಾನೂನು ಪ್ರಕಾರ ತಪ್ಪು.

ಹಿಂದೆ ಒಂದು ಪಕ್ಷ ಲೋಕಾಯುಕ್ತ ಅಧಿಕಾರವನ್ನೇ ಕಿತ್ತಿಕೊಂಡು ಎಸಿಬಿಯನ್ನು ರಚನೆ ಮಾಡಿತ್ತು. ನಂತರ ಚುನಾವಣೆ ಸಮಯದಲ್ಲಿ ವಿರೋಧ ಪಕ್ಷದವರು ಅಧಿಕಾರಕ್ಕೆ ಬಂದ 24 ಘಂಟೆಯೊಳಗೆ ಎಸಿಬಿಯನ್ನು ಬಂದ್​ ಮಾಡುತ್ತೇವೆ ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಏನು ಮಾಡಲಿಲ್ಲ ಎಂದು ಪರರೋಕ್ಷವಾಗಿ ಬಿಜೆಪಿ-ಕಾಂಗ್ರೆಸ್​ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ವ್ಯವಸ್ಥೆ ಬದಲಾಗಬೇಕಿರುವುದು ಮತದಾರನಿಂದ. ಇಚ್ಚೆ ಪೂರೈಸುವ ವ್ಯಕ್ತಿಯನ್ನ ಚುನಾವಣೆಯಲ್ಲಿ ಆರಿಸಬೇಕು. ಸೂಕ್ತ ವ್ಯಕ್ತಿ ಇಲ್ಲದಿದ್ದರೇ ನೋಟಾಗೆ ಮತಹಾಕಿ. ಆಗ ಒಳ್ಳೆ ವ್ಯಕ್ತಿಯನ್ನ ಪಕ್ಷದಿಂದ ನಿಲ್ಲಸಿದ್ದರೇ ಅಧಿಕಾರ ಸಿಗಲ್ಲ ಎನ್ನುವುದು ಅವರಿಗೆ ತಿಳಿಯುತ್ತೆ. ಹಣ ಮಾಡಲು, ಅಧಿಕಾರ ಚಲಾಯಿಸಲು ರಾಜಕೀಯಕ್ಕೆ ಬರಬಾರದು ಎಂದು ಕಿವಿಮಾತನ್ನು ಹೇಳಿದ್ದಾರೆ.

ವಿಪಕ್ಷದಲ್ಲಿ ಆಡಳಿತ ನಡೆಸುತ್ತಿರುವವರ ಮೇಲೆ ಕಮಿಷನ್​ ಆರೋಪ ಮಾಡುತ್ತಾರೆ. ಆದರೆ, ನನ್ನ ಪ್ರಕಾರ ಅಡಿಕೆ ಕದ್ದರೂ ಕಳ್ಳ ಆನೆ ಕದ್ದರೂ ಕಳ್ಳ ಎಂದು ರಾಜಕೀಯ ಪಕ್ಷಗಳ ಹೆಸರೇಳದೆ ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ವಾಗ್ದಾಳಿ ನಡೆಸಿದ್ದಾರೆ.