ಉಡುಪಿ: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಕಾರೊಂದರಿಂದ ಬಲವಂತವಾಗಿ ಹೊರನೂಕಲ್ಪಟ್ಟ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರು ಹಾಗೂ ಮಹಿಳಾ ಪೊಲೀಸರ ಸಹಾಯದಿಂದ ಶನಿವಾರ ರಾತ್ರಿ ರಕ್ಷಿಸಿದ್ದಾರೆ. ವಿಚಾರಣೆ ವೇಳೆ ಆಕೆಯ ಹೆಸರು ಸುಮಾ(45), ಮೂಲತಃ ಚಿಕ್ಕಮಗಳೂರಿನವಳು ಎಂದು ತಿಳಿದುಬಂದಿದೆ. ರಾತ್ರಿ ಕಾರಿನಿಂದ ಈಕೆಯನ್ನು ಬಲವಂತವಾಗಿ ಹೊರದೂಡಿ ಪರಾರಿಯಾಗಿದ್ದು, ನಡು ರಸ್ತೆಯಲ್ಲೇ ಮಲಗಿದ್ದಳು. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಾರಿನಿಂದ ಹೊರ ದಬ್ಬಿದವರು ಯಾರೆಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಹಿಳೆಯೂ ಆ ಕುರಿತು ಸರಿಯಾಗಿ ತಿಳಿಸುತ್ತಿಲ್ಲ. ಕಾರ್ಯಾಚರಣೆ ವೇಳೆ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ನವ್ಯಾ ಉಪಸ್ಥಿತರಿದ್ದರು. ಮಹಿಳೆಯನ್ನು ಉಡುಪಿಯ ಸಖಿ ಸೆಂಟರ್‌ಗೆ ದಾಖಲಿಸಲಾಗಿದ್ದು, ಸಂಬಂಧಿಕರು ಇದ್ದಲ್ಲಿ ಮಹಿಳಾ ಠಾಣೆ ಸಂಪರ್ಕಿಸಬಹುದು.