ಜಿಲ್ಲೆ

ಸೇವಾ ಭದ್ರತೆ ನೀಡುವಂತೆ ಮನವಿ

ಕಾರವಾರ: ಸೇವಾ ಭದ್ರತೆ, ಇಲಾಖೆಯ ನೇರ ವೇತನ ನೀಡುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ ಹಾಗೂ ವಸತಿ ಶಾಲೆಗಳ ಹೊರ ಗುತ್ತಿಗೆ ನೌಕರರು ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ಮನವಿ ಸಲ್ಲಿಸಿದರು. ಹಾಸ್ಟೆಲ್‌ ಹಾಗೂ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾಗಾರರು, ಕಾವಲುಗಾರರು, ಅಡುಗೆಯವರು ಹಾಗೂ ಅಡುಗೆ ಸಹಾಯಕರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲವಾಗಿದೆ. ವಾರ್ಡನ್‌ ಹಾಗೂ ತಾಲೂಕು, ಜಿಲ್ಲೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.
ನಮ್ಮೆಲ್ಲ ಬೇಡಿಕೆಗಳನ್ನು ಆಗ್ರಹಿಸಿ ಜುಲೈ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದೆವು. ಆಗ ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತರು ಸ್ಥಳಕ್ಕೆ ಆಗಮಿಸಿ ಸಭೆಯನ್ನು ನಡೆಸಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸಭೆ ಕರೆದಿಲ್ಲ. ನಮ್ಮ ಸಮಸ್ಯೆಗಳು ಬಗೆಹರಿದಿಲ್ಲ. ಇದರಿಂದ ಇಡೀ ರಾಜ್ಯದಲ್ಲಿ ನಾವು ಹೋರಾಟ ನಡೆಸಿದ್ದೇವೆ. ನಮಗೆ ಇಲಾಖೆಯಿಂದ ನೇರವಾಗಿ ವೇತನ ಕೊಡಬೇಕು. ನಿವೃತ್ತರಿಗೆ ಸೇವಾ ಭದ್ರತೆ ಕೊಡಬೇಕು. 10 ವರ್ಷ ಸೇವೆ ಸಲ್ಲಿಸಿದ ನೌಕರರನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮದಡಿ ತರಬೇಕು. ಮಾಸಿಕ ಕನಿಷ್ಠ 31 ಸಾವಿರ ರೂ. ವೇತನ ನೀಡಬೇಕು. ಕಾರ್ಮಿಕ ಕಾಯ್ದೆಯಂತೆ ವಾರದ ರಜೆ ನೀಡಬೇಕು. ಕೆಲಸದ ಕನಿಷ್ಠ ಅವಧಿ ನಿಗದಿ ಮಾಡಬೇಕು. ಗುತ್ತಿಗೆದಾರರು ಸಂಬಳದ ಚೀಟಿ, ಆದೇಶ ಪತ್ರ, ಗುರುತಿನ ಚೀಟಿ, ಸೇವಾ ಪ್ರಮಾಣಪತ್ರ ಇಎಸ್‌ಐ ಮತ್ತು ಪಿಎಫ್‌ ಹಣ ತುಂಬಿದ ರಶೀದಿ ಕೊಡಬೇಕು. ಸುಪ್ರೀಂ ಕೋರ್ಟ್‌ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದುಕೊಂಡಿರುವ ನೌಕರರಿಗೆ ಮತ್ತೆ ವೇತನ ನೀಡಬೇಕು ಎಂಬುದು ಸೇರಿ ಒಟ್ಟು 20 ಕ್ಕೂ ಹೆಚ್ಚು ಬೇಡಿಕೆಗಳ ಪಟ್ಟಿಯನ್ನು ನೀಡಲಾಗಿದೆ. ಉದಯ ನಾಯ್ಕ, ನಾಗರಾಜ ನಾಯ್ಕ, ಮಹಾಬಲೇಶ್ವರ ವಂದಿಗೆ, ಶ್ಯಾಮಲಾ ಕೊಳಂಬಕರ್‌, ಸುಲಕ್ಷಾ ನಾಯ್ಕ, ಸುವರ್ಣಾ ನಾಯಕ, ಮಮತಾ ನಾಯ್ಕ ಇತರರು ಇದ್ದರು.
ಇಎಸ್‌ಐ ಕಾರ್ಡ್‌ ನೀಡಲು ಮನವಿ
ಬಿಕೆಆರ್‌ ಸರ್ವೀಸ್‌ ಏಜೆನ್ಸೀಸ್‌ ಅಡಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರು ತಮಗೆ ಕಂಪನಿ 2 ತಿಂಗಳ ವೇತನ ನೀಡದೇ ಇರುವ ಬಗ್ಗೆ ದೂರು ನೀಡಿದ್ದಾರೆ. ಕಂಪನಿ ಎರಡು ವರ್ಷಗಳಿಂದ ಇಎಸ್‌ಐ ಕಾರ್ಡ್‌ಗಳನ್ನು ನೀಡಿಲ್ಲ. ವೇತನವನ್ನು ವಿಳಂಬವಾಗಿ ನೀಡುತ್ತಿದೆ. ಪ್ರತಿ ತಿಂಗಳು 5  ನೇ ತಾರೀಕಿನ ಒಳಗೆ ವೇತನ ನೀಡಲು ಕಂಪನಿಗೆ ಸೂಚಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗೆ ಸೂಚನೆ ನೀಡಿದ್ದಾರೆ.