ಜಿಲ್ಲೆ

ಮನೆಯ ಹಕ್ಕು ಪತ್ರ ನೀಡುವಂತೆ ಮನವಿ

ಹರಪನಹಳ್ಳಿ: ತಾಲೂಕಿನ ಬೆಣ್ಣೆಹಳ್ಳಿ ಗ್ರಾಪಂ ವ್ಯಾಪ್ತಿಯ ನಜೀರ್ ನಗರದ ನಿವಾಸಿಗಳಿಗೆ ಮನೆಯ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸಿಪಿಐ ಪಕ್ಷದಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಿ.ಗಿರೀಶ್ ಬಾಬುಗೆ ಮನವಿ ಸಲ್ಲಿಸಲಾಯಿತು.

ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ನಜೀರ್ ನಗರದಲ್ಲಿ ಸುಮಾರು 20 ವರ್ಷಗಳಿಂದ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಡ ವರ್ಗದವರಿಗೆ ಗ್ರಾಪಂ ಅಥವಾ ತಾಲೂಕು ಆಡಳಿತ ಇದುವರೆಗೂ ಡೋರ್ ನಂಬರ್ ನೀಡಿಲ್ಲ. ಇದರಿಂದ ಸರ್ಕಾರಿ ಸೌಲಭ್ಯಗಳು ಪಡೆಯಲು ಕಷ್ಟವಾಗಿದೆ. ಈ ಹಿಂದಿನ ಸರ್ಕಾರ ಉಳುವವನೆ ಭೂಮಿಯ ಒಡೆಯ, ವಾಸಿಸುವವನೆ ಮನೆಯ ಒಡೆಯ ಎಂಬ ಕಾನೂನು ಜಾರಿಗೊಳಿಸಿದರೂ ಬಡವರಿಗೆ ಹಕ್ಕು ಪತ್ರ ನೀಡದೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮನೆಯ ಹಕ್ಕು ಪತ್ರ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.