458 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

hakkupatra
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕಳೆದ ಹಲವು ದಶಕಗಳಿಂದ ಹಕ್ಕುಪತ್ರಕ್ಕಾಗಿ ಕಾದಿದ್ದ ನಗರದ ಸದರಸೋಫಾ ಹಾಗೂ ಬಾಣತಿಕಟ್ಟಿಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡಿರುವುದು ಶ್ಲಾಘನೀಯ. ಹಕ್ಕುಪತ್ರ ವಿತರಣೆ ಮಾಡುತ್ತಿರುವುದು ಕ್ಷೇತ್ರದ ಜನರ ಋಣ ತೀರಿಸಲು ದೊರೆತ ಸದಾವಕಾಶವೇ ಸರಿ ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಭಾನುವಾರ ಸಂಜೆ ಸದರಸೋಫಾದಲ್ಲಿ 127 ಮತ್ತು ಬಾಣತಿಕಟ್ಟಿಯಲ್ಲಿ 331 ಸೇರಿ ಒಟ್ಟು 458ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ತಮ್ಮ ತಪ್ಪಸ್ಸು ಇಂದು ಫಲಿಸಿದಂತಾಗಿದೆ. ತಮ್ಮೆಲ್ಲರಿಗೂ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ತಮ್ಮ ಮನೆಯ ಹಕ್ಕನ್ನು ತಮಗೆ ನೀಡಲಾಗಿದೆ. ಇನ್ನು ತಮ್ಮ ಕನಸಿನ ಸೂರಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಿ ಎಂದರು.

ಸ್ವಂತ ಮನೆ ಹೊಂದಬೇಕೆಂಬುವುದು ಪ್ರತಿಯೊಬ್ಬರ ಕನಸು. ಇನ್ನು ಮನೆ ಇದ್ದು, ಅದರ ಮೇಲೆ ಹಕ್ಕಿಲ್ಲ ಎಂದಾದರೆ ಮನೆ ಇದ್ದು ಇಲ್ಲದಂತಾಗುತ್ತದೆ. ಇನ್ನು ಮುಂದೆ ಯಾವುದೇ ಆತಂಕ ಪಡುವುದು ಬೇಡ. ಯಾರೋ ಬಂದು ಮನೆ ಖಾಲಿ ಮಾಡಿಸಬಹುದೆನ್ನುವ ಭಯವಿಲ್ಲ. ನನಗೆ ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿ ಆಶೀರ್ವಾದ ಮಾಡಿದ್ದೀರಿ. ಇಂದು ಆ ಋಣ ತಿರಿಸುವ ಸುಸಂದರ್ಭ ಒದಗಿಬಂದಿದೆ ಎಂದು ಹೇಳಿದರು.

ಬಡವರು, ಕೂಲಿ ಕಾರ್ವಿುಕರು, ದಿನಗೂಲಿ ನೌಕರರೇ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ವಾಸವಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಉತ್ತಮ ಶಿಕ್ಷಣ ನೀಡಬೇಕು. ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net