ಜಿಲ್ಲೆ

ರೆಮ್‌ಡೆಸಿವರ್ ಔಷಧ ಅಕ್ರಮ ಮಾರಾಟ, ಇಬ್ಬರ ಬಂಧನ

ದಾವಣಗೆರೆ: ಕೋವಿಡ್ ಇಂಜೆಕ್ಷನ್ ‘ರೆಮ್‌ಡೆಸಿವರ್’ ಔಷಧವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯ ಇಬ್ಬರು ನೌಕರರನ್ನು ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆಯ ದಿನಗೂಲಿ ನೌಕರ ಗಣೇಶಪ್ಪ ಹಾಗೂ ಫಾರ್ಮಸಿಸ್ಟ್ ಮಂಜುನಾಥ್ ಬಂಧಿತರು. ಅವರಿಂದ 9 ರೆಮ್‌ಡೆಸಿವರ್ ಔಷಧ, 10 ಸಾವಿರ ರೂ. ನಗದು ಹಾಗೂ ಒಂದು ಆಟೋ ವಶಕ್ಕೆ ಪಡೆಯಲಾಗಿದೆ.

ಗಣೇಶಪ್ಪ ಬುಧವಾರ ಜಿಲ್ಲಾಸ್ಪತ್ರೆಯ ಹಿಂಭಾಗ ಆಟೋದಲ್ಲಿ ‘ರೆಮ್‌ಡಿಸಿವರ್’ ಔಷಧ ಮಾರಾಟ ಮಾಡುತ್ತಿದ್ದ ವೇಳೆ ಬಡಾವಣೆ ಠಾಣೆಯ ಪಿಎಸ್‌ಐ ಅರವಿಂದ್, ಔಷಧ ಪರಿವೀಕ್ಷಕಿ ಗೀತಾ ಎಂ.ಎಸ್. ಮತ್ತು ಸಿಬ್ಬಂದಿ ದಾಳಿ ನಡೆಸಿ ಗಣೇಶಪ್ಪನನ್ನು ಬಂಧಿಸಿದರು.

ಆತನನ್ನು ವಿಚಾರಣೆ ಮಾಡಿದಾಗ, ‘ಔಷಧಗಳನ್ನು ಆಸ್ಪತ್ರೆಯ ಫಾರ್ಮಸಿಸ್ಟ್ ಮಂಜುನಾಥ ನೀಡಿದ್ದು, ಮಾರಾಟದಿಂದ ಬಂದ ಹಣದಲ್ಲಿ ಇಬ್ಬರೂ ಹಂಚಿಕೊಳ್ಳೋಣ’ ಎಂದು ಹೇಳಿದ್ದಾಗಿ ಮಾಹಿತಿ ನೀಡಿದ. ಬಳಿಕ ಮಂಜುನಾಥ್‌ನನ್ನು ವಶಕ್ಕೆ ಪಡೆಯಲಾಯಿತು.