ಬದಿಯಡ್ಕ: ಧರ್ಮ, ಆಚರಣೆ ಉಳಿಯಲು ನಂಬಿಕೆ ಗಟ್ಟಿಯಾಗಿರಬೇಕು. ಪಕ್ಷ, ಮತ ಯಾವುದಾಗಿದ್ದರೂ ಸನಾತನ ನಂಬಿಕೆ ಬಲಪಡಿಸುವ ನಿಟ್ಟಿನ ಚಟುವಟಿಕೆಗಳಿಗೆ ಬೆಂಬಲ ನಿರಂತರವಾಗಿರಬೇಕು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ನೆಕ್ರಾಜೆ ಗ್ರಾಮ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಆರಂಭಗೊಂಡಿರುವ ಪುನಃನವೀಕರಣ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಎರಡನೇ ದಿನವಾದ ಸೋಮವಾರ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿ, ವಿವಾಹಾದಿ ಸಂಸ್ಕಾರಗಳ ಶೀಘ್ರ ಪ್ರಾಪ್ತಿಗೆ ಕಾರಣಿಕದಿಂದ ಶೋಭಿಸುತ್ತಿರುವ ಉಮಾಮಹೇಶ್ವರ ಸನ್ನಿಧಿ ಪುನರ್ ನವೀಕರಣಗೊಂಡಿರುವುದು ಸಂತಸ ತಂದಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ರವೀಶ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡಿ, ಹಿಂದು ಸಮಾಜ ಎಚ್ಚೆತ್ತುಕೊಳ್ಳುವ ಕಾಲಘಟ್ಟದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳ ಪುನರುತ್ಥಾನಕ್ಕೆ ಅಹರ್ನಿಶಿ ಶ್ರಮಿಸುತ್ತಿರುವುದು ಸ್ತುತ್ಯರ್ಹ. ಸತ್ಕರ್ಮ ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.
ಧಾರ್ಮಿಕ ಮುಂದಾಳು, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಮಾತನಾಡಿದರು. ಶ್ರೀಕ್ಷೇತ್ರದ ದೈವಜ್ಞ ನಾಗೇಂದ್ರ ಭಾರಧ್ವಾಜ್ ಕೆ.ಸಿ.ಸುರತ್ಕಲ್, ಮಧೂರು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ನೆಕ್ರಾಜೆ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ವಿ.ಡಿ.ಶೆಟ್ಟಿ, ಉದ್ಯಮಿ ಶಿವಶಂಕರ ನೆಕ್ರಾಜೆ, ಉದ್ಯಮಿ ಹರೀಶ್ ಪುತ್ರಕಳ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ, ಉಪಾಧ್ಯಕ್ಷ ವಸಂತ ಪೊಡಿಪ್ಪಳ್ಳ, ರವಿಶಂಕರ ಪುಣಿಚಿತ್ತಾಯ ಪುಂಡೂರು, ಶಿವದಾಸ್ ರೈ ನಾರಂಪಾಡಿ, ಶ್ರೀಧರ ಶೆಟ್ಟಿ ಮುಟ್ಟಂ, ಸ್ವಾಗತ ಸಮಿತಿ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು.
ಬೆಳಗ್ಗೆ ಗಣಪತಿ ಹೋಮ ಸಹಿತ ವಿವಿಧ ವಿಧಿವಿಧಾನ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುಮಾರಮಂಗಲದ ಸಾರಂಗ ಸಂಗೀತ ಶಾಲೆ ಸರಸ್ವತಿ ಕೃಷ್ಣನ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ, ಸಂಜೆ ಬಜಕ್ಕೂಡ್ಲು ಗಣೇಶ ಶೆಟ್ಟಿ ಬಳಗದವರಿಂದ ಭಕ್ತಿಸಂಗೀತ, ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.
ಇಂದಿನ ಕಾರ್ಯಕ್ರಮ
ಬೆಳಗ್ಗೆ 6ರಿಂದ ಗಣಪತಿಹೋಮ, ವಿವಿಧ ಶಾಂತಿಹೋಮ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7 ರಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ, ತ್ರಿಕಾಲಪೂಜೆ, ಅನುಜ್ಞಾ ಕಲಶಪೂಜೆ, ಅಧಿವಾಸ ಹೋಮ, ಮಹಾಪೂಜೆ, ರಾತ್ರಿ ಪೂಜೆ ನಡೆಯಲಿದೆ. ಭಜನಾ ಮಂಟಪದಲ್ಲಿ ಬೆಳಗ್ಗೆ 8ರಿಂದ ಭಜನಾ ಸಂಕೀರ್ತನೆ, 11.30ರಿಂದ 1.30ರವರೆಗೆ ಕುರುಂಬುಡೇಲು ಮಹಾಲಿಂಗ ಭಟ್ ಬೆಳ್ಳಾರೆ ಮತ್ತು ತಂಡದವರಿಂದ ನಾರಾಯಣೀಯಂ ಪಾರಾಯಣ, ಬೆಳಗ್ಗೆ 9.30ರಿಂದ ಸುಧಾಕರ ಕೋಟೆಕುಂಜತ್ತಾಯರಿಂದ ಹರಿಕಥಾ ಸಂಕೀರ್ತನೆ, ಅಪರಾಹ್ನ 1ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ಕೈಕೊಟ್ಟಿಕಳಿ, ಸಂಘ ನೃತ್ಯ, ರಾತ್ರಿ 8ರಿಂದ ವಿದುಷಿ ಡಾ.ವಿದ್ಯಾಲಕ್ಷ್ಮೀ ಬೇಳ ಅವರ ಶಿಷ್ಯ ವೃಂದದವರಿಂದ ನೃತ್ಯ ವೈಭವ ನಡೆಯಲಿದೆ.