ಸುಬ್ರಹ್ಮಣ್ಯದಲ್ಲಿ ಒನ್‌ವೇ ಸಂಚಾರದಿಂದ ವಾಹನ ದಟ್ಟಣೆ ಕಡಿಮೆ ಆಗಿರುವುದು. 
ಜಿಲ್ಲೆ

ಸುಬ್ರಹ್ಮಣ್ಯ ಸಂಚಾರ ಸುಗಮ : ಹೊಸ ನಿಯಮ ಜಾರಿಯಾಗಿ ಟ್ರಾಫಿಕ್ ಜಾಮ್‌ನಿಂದ ಮುಕ್ತಿ : ಪಾರ್ಕಿಂಗ್‌ಗೆ ವ್ಯವಸ್ಥೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ದಿನಗಳಲ್ಲಿ ಭಾರಿ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈಗ ಪೇಟೆಯಲ್ಲಿ ಜಾರಿಗೆ ತಂದಿರುವ ಹೊಸ ಸಂಚಾರ ನಿಯಮದಿಂದ ಸುಗಮ ಸಂಚಾರ ಸಾಧ್ಯವಾಗಿದೆ.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಮತ್ತು ಸುಬ್ರಹ್ಮಣ್ಯ ಠಾಣಾಧಿಕಾರಿಯ ಕಾರ್ಯತತ್ಪರತೆಯಿಂದಾಗಿ ವಿನೂತನ ಪಾರ್ಕಿಂಗ್ ವ್ಯವಸ್ಥೆ ಮತ್ತು ಸಂಚಾರ ನಿಯಮ ಜಾರಿಗೆ ಬಂದಿದೆ. ಇದರಿಂದಾಗಿ ವಾರಾಂತ್ಯದಲ್ಲಿ ಮತ್ತು ವಿಶೇಷ ದಿನಗಳಲ್ಲಿ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಆಗುತ್ತಿದ್ದ ಸಂಕಷ್ಟಕ್ಕೆ ಮುಕ್ತಿ ದೊರಕಿದೆ.

ಸಾರ್ವಜನಿಕ ಸಭೆಯಲ್ಲಿ ನಿರ್ಣಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯವಸ್ಥಿತ ಸಂಚಾರಿ ನಿಯಮ ಜಾರಿಯಾಗಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಬಂದಿತ್ತು. 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ವ್ಯವಸ್ಥಿತ ಸಂಚಾರ ಹಾಗೂ ಪಾರ್ಕಿಂಗ್‌ಗೆ ಮಾರ್ಗಸೂಚಿ ಹೊರಡಿಸಿ ಆದೇಶಿಸಿದ್ದರು. ಇತ್ತೀಚೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಗ್ರಾಪಂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸಾರ್ವಜನಿಕರ ವಿಶೇಷ ಸಭೆ ನಡೆಸಲಾಯಿತು. ಸಭೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದ ಪಾರ್ಕಿಂಗ್ ಹಾಗೂ ಸಂಚಾರಿ ನಿಯಮವನ್ನು ಪ್ರಸ್ತುತ ದಿನದ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲು ನಿರ್ಣಯಿಸಲಾಯಿತು. ಪ್ರಾಯೋಗಿಕವಾಗಿ ಹೊಸ ಸಂಚಾರಿ ಹಾಗೂ ಪಾರ್ಕಿಂಗ್ ನಿಯಮ ಜಾರಿಗೆ ತರಲಾಗಿತ್ತು. ಪ್ರಾಯೋಗಿಕ ಹಂತದಲ್ಲಿ ಹೊಸ ಕ್ರಮ ಯಶಸ್ವಿಯಾಗಿದ್ದು, ಹೊಸ ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಮತ್ತು ವಾಹನ ಲಾಕ್ ಮಾಡುವ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಹೊಸ ದಾರಿ

ಹೊಸ ಸಂಚಾರಿ ನಿಯಮದಂತೆ ಕಾಶಿಕಟ್ಟೆಯಿಂದ ಸುಬ್ರಹ್ಮಣ್ಯ ರಥಬೀದಿ ಜಂಕ್ಷನ್‌ವರೆಗೆ ಏಕಮುಖ ರಸ್ತೆ ಇದ್ದು, ಇದರಲ್ಲಿ ಪ್ರವೇಶ ಮಾತ್ರ. ಸವಾರಿ ಮಂಟಪದಿಂದ ಕಾಶಿಕಟ್ಟೆ ತನಕ ಬೈಪಾಸ್ ರಸ್ತೆಯಲ್ಲಿ ಏಕಮುಖವಾಗಿ ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಕಾಶಿಕಟ್ಟೆಯಿಂದ ಬಸ್ ನಿಲ್ದಾಣಕ್ಕೆ ಅಥವಾ ನೂಜಿಲ, ಆದಿಸುಬ್ರಹ್ಮಣ್ಯ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪ್ರವೇಶ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ಸವಾರಿಮಂಟಪ ಮೂಲಕ ಬೈಪಾಸ್ ರಸ್ತೆಯಲ್ಲಿ ನಿರ್ಗಮನಕ್ಕೆ ಸೂಚಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ನೂತನ ಸಂಚಾರ ನಿಯಂತ್ರಣ ಕೊಠಡಿ ತೆರೆದಿರುವುದು.

ಇಲ್ಲಿ ಪಾರ್ಕಿಂಗ್ ಮಾಡಿ

ಕಾಶಿಕಟ್ಟೆಯಿಂದ ಸುಬ್ರಹ್ಮಣ್ಯ ಜಂಕ್ಷನ್‌ವರೆಗಿನ ಎರಡೂ ಬದಿಯಲ್ಲೂ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ಬೈಪಾಸ್ ರಸ್ತೆಯಲ್ಲಿ ಒಂದು ಬದಿಯ ಪಾರ್ಕಿಂಗ್ ನಿಷೇಧಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿ ಎರಡು ಆಟೋರಿಕ್ಷಾ ಹಾಗೂ ಎರಡು ಟ್ಯಾಕ್ಸಿಗಳಿಗೆ ಹಾಗೂ ರಥಬೀದಿ ಜಂಕ್ಷನ್ ಬಳಿ ಎರಡು ಆಟೋ ರಿಕ್ಷಾಗಳಿಗೆ ಬಾಡಿಗೆಗೆ ನಿಲ್ಲಿಸಲು ಅವಕಾಶ ನೀಡಲಾಗಿದೆ. ಉಳಿದಂತೆ ಆಟೋರಿಕ್ಷಾಗಳು ಹಾಗೂ ಟ್ಯಾಕ್ಸಿಗಳಿಗೆ ಅಕ್ಷರ ವಸತಿ ಗೃಹದ ಪಾರ್ಕಿಂಗ್ ಪ್ರದೇಶದಲ್ಲಿ ಹಾಗೂ ರಥಬೀದಿ ಜಂಕ್ಷನ್ ಪಕ್ಕದ ಖಾಲಿ ಜಾಗದಲ್ಲಿ ಆಟೋರಿಕ್ಷಾ ಪಾರ್ಕಿಂಗ್‌ಗೆ ಸ್ಥಳ ಗುರುತಿಸಲಾಗಿದೆ. ಭಕ್ತರ ವಾಹನಗಳನ್ನು ಅಭಯ ಆಂಜನೇಯ ಗುಡಿ ಬಳಿ ಪಾರ್ಕಿಂಗ್ ಪ್ರದೇಶದಲ್ಲಿ, ಇಂಜಾಡಿ ಬಳಿಯ ಗ್ರೌಂಡ್‌ನಲ್ಲಿ ಪಾರ್ಕಿಂಗ್‌ಗೆ ಸೂಚಿಸಲಾಗಿದೆ. ಸ್ಥಳೀಯರ ಹಾಗೂ ವ್ಯಾಪಾರಸ್ಥರ ವಾಹನಗಳನ್ನು ನಿಯೋ ಮೈಸೂರು ಕೆಫೆ ಮುಂಭಾಗದ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ಸೂಚಿಸಲಾಗಿದೆ.

ಸುಬ್ರಹ್ಮಣ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಹೊಸ ಸಂಚಾರಿ ನಿಯಮ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪ್ರಾಯೋಗಿಕ ಹಂತ ಯಶಸ್ವಿಯಾಗಿದೆ. ಮುಂದೆ ಅದನ್ನು ಕಡ್ಡಾಯ ಜಾರಿಗೊಳಿಸಲಾಗುತ್ತಿದೆ. ಸಮರ್ಪಕವಾಗಿ ಪಾರ್ಕಿಂಗ್ ಹಾಗೂ ಸಂಚಾರಿ ನಿಯಮ ಜಾರಿಗೆ ತರುವ ಉದ್ದೇಶದಿಂದ ಇಲ್ಲಿಗೆ ನಿಯೋಜಿಸಲಾಗುವ ಸಿಬ್ಬಂದಿಗೆ ಸಂಚಾರಿ ಪೊಲೀಸರಿಂದ ತರಬೇತಿ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು. - ಜುಬಿನ್ ಮೊಹಾಪಾತ್ರ, ಎಸಿ, ಆಡಳಿತಾಧಿಕಾರಿಗಳು ಕುಕ್ಕೆ ದೇವಳ 2015ರ ಡಿಸಿ ಆದೇಶವನ್ನು ಪ್ರಸ್ತುತ ದಿನಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಲಾಗಿದೆ. ಎಸಿ ಅವರ ಆದೇಶದಂತೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು, ಎಸಿ ಅವರ ಗಮನಕ್ಕೆ ತಂದು ಅನುಷ್ಠಾನಗೊಳಿಸಲಾಯಿತು. ಈ ಮೂಲಕ ಸುಬ್ರಹ್ಮಣ್ಯದಲ್ಲಿ ಹೊಸ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಜಾರಿಗೆ ತರಲಾಗಿದೆ. ಸಾರ್ವಜನಿಕರು, ವಾಹನ ಸವಾರರ ಸಹಕಾರದಿಂದ ಉತ್ತಮ ಸ್ಪಂದನೆ ದೊರೆತಿದೆ. - ಕಾರ್ತಿಕ್, ಉಪನಿರೀಕ್ಷಕರು, ಸುಬ್ರಹ್ಮಣ್ಯ ಪೊಲೀಸ್ ಠಾಣೆ