ಜಿಲ್ಲೆ

ಉತ್ತಮ ಆರೋಗ್ಯಕ್ಕಾಗಿ ನಿಯಮಿತ ತಪಾಸಣೆ

ಇಂದಿರಾ ಎನ್ ಕೆ

ಕುಂದಾಪುರ: ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ನಮ್ಮದೇ ಜವಾಬ್ದಾರಿ. ಆರೋಗ್ಯಕ್ಕೆ ಸಂಬಂಧಿಸಿದ ಉಚಿತ ಶಿಬಿರಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಟ್ರಸ್ಟ್ ಉಪಾಧ್ಯಕ್ಷ ಕೆ.ಶಾಂತಾರಾಮ ಪ್ರಭು ಹೇಳಿದರು.

ಕುಂದಾಪುರ ದುರ್ಗಾಂಬಾ ಮೋಟಾರ್ಸ್‌ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಭಂಡಾರ್‌ಕಾರ್ಸ್‌ ಕಾಲೇಜಿನ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕ, ಯೂತ್ ರೆಡ್ ಕ್ರಾಸ್ ಘಟಗಗಳ ಸಹಯೋಗದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ ಆರೋಗ್ಯ ಉಚಿತ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ರಾಮಪ್ರಸಾದ್ ಮಾತನಾಡಿ, ಉತ್ತಮ ಹವ್ಯಾಸಗಳಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಮಾದಕ ವಸ್ತುಗಳಿಂದ ದೂರ ಇದ್ದಷ್ಟು ಅತ್ಯುತ್ತಮ ದೈಹಿಕ ಕ್ಷಮತೆ ಜನರದ್ದಾಗುತ್ತದೆ ಎಂದರು.

ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ದುರ್ಗಾಂಬಾ ಮೋಟಾರ್ಸ್‌ ಮಾಲೀಕ ಸದಾನಂದ ಛಾತ್ರ ಉಪಸ್ಥಿತರಿದ್ದರು. 150ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿದ್ದರು. ಶಶಾಂಕ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು.