ಬೆಂಗಳೂರು: ರಾಜ್ಯದ ಶಿವಮೊಗ್ಗ, ದಾವಣಗೆರೆ ಮತ್ತು ಚಾಮರಾಜನಗರದಲ್ಲಿ ಮೇ ತಿಂಗಳಲ್ಲಿ ಒಂದು ದಿನದ ಮಳೆ ಮತ್ತೆ ದಾಖಲೆ ಎನಿಸಿಕೊಂಡಿದೆ. ಶಿವಮೊಗ್ಗದಲ್ಲಿ 49 ವರ್ಷಗಳ ಬಳಿಕ ಒಂದೇ ದಿನದಲ್ಲಿ ಅಂದರೆ ಮೇ 20ರಂದು 118 ಮಿಮೀ ಮಳೆ ಸುರಿದಿದೆ. 1973ರ ಮೇ 31ರಂದು 94 ಮಿಮೀ ಮಳೆಯಾಗಿತ್ತು. ದಾವಣಗೆರೆಯಲ್ಲಿ 14 ವರ್ಷಗಳ ಬಳಿಕ ಮೇ 19ರಂದು 88 ಮಿಮೀ ಮಳೆಯಾಗಿದೆ. 2008ರ ಮೇ 26ರಂದು 60.5 ಮಿಮೀ ಮಳೆ ಸುರಿದಿತ್ತು. ಅದೇರೀತಿ, ಚಾಮರಾಜನಗರದಲ್ಲಿ 11 ವರ್ಷಗಳ ಬಳಿಕ ಒಂದೇ ದಿನದಲ್ಲಿ 82.2 ಮಿಮೀ ಮಳೆಯಾಗಿದೆ. 2011ರ ಮೇ 25ರಂದು 54.8 ಮಿಮೀ ಮಳೆಯಾಗಿತ್ತು.
ದೇಶದಲ್ಲಿ ಒಟ್ಟಾರೆ ಮೇನಲ್ಲಿ ವಾಡಿಕೆಯಂತೆ 62 ಮಿಮೀ ಮಳೆಯಾಗಬೇಕಿದ್ದು, ಶೇ. 34 ಹೆಚ್ಚು ಅಂದರೆ 83.4 ಮಿಮೀ ಮಳೆಯಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮೇನಲ್ಲಿ ವಾಡಿಕೆಯಂತೆ 188 ಮಿಮೀ ಮಳೆ ಬದಲಾಗಿ 252 ಮಿಮೀ, ದಕ್ಷಿಣ ಭಾರತದಲ್ಲಿ 73 ಮಿಮೀ ಮಳೆ ಬದಲಾಗಿ 140 ಮಿಮೀ ಮಳೆಯಾಗಿದೆ. ಮಧ್ಯ ಭಾರತದಲ್ಲಿ 20 ಮಿಮೀ ಮಳೆಯಾಗಬೇಕಿತ್ತು. 17 ಮಿಮೀ ಮಳೆಯಾಗಿದ್ದು, ಶೇ.12 ಕೊರತೆಯಾಗಿದೆ. ವಾಯುವ್ಯ ರಾಜ್ಯಗಳಲ್ಲಿ 35 ಮಿಮೀ ಮಳೆ ಬದಲಾಗಿ 31.2 ಮಿಮೀ ಮಳೆ ಸುರಿದಿದೆ.
5 ದಿನ ಮಳೆ ಮಳೆ: ರಾಜ್ಯದ ಹಲವೆಡೆ ಸುರಿಯುತ್ತಿರುವ ಮುಂಗಾರು ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಸೋಮವಾರ ದಕ್ಷಿಣ ಒಳನಾಡಿನಲ್ಲಿ ಮಳೆ ಅಬ್ಬರ ಜೋರಾಗಿತ್ತು. ಮಂಡ್ಯದಲ್ಲಿ 56 ಮಿಮೀ, ತುಮಕೂರಿನ ಕುಣಿಗಲ್‌ನಲ್ಲಿ 41 ಮಿಮೀ, ಕೋಲಾರದ ಟಮಕದಲ್ಲಿ 37 ಮಿಮೀ, ಬಳ್ಳಾರಿಯ ಹಗರಿಯಲ್ಲಿ 34 ಮಿಮೀ ಮತ್ತು ಬೆಂಗಳೂರಿನಲ್ಲಿ 32 ಮಿಮೀ ಮಳೆ ಸುರಿದಿದೆ. ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಜೂ 7ರಿಂದ ಜೂ 9ರವರೆಗೆ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜೂ 8ರಂದು ವ್ಯಾಪಕವಾಗಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ೋಷಿಸಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳದಲ್ಲಿ ಜೂ 9, 10ರಂದು ಯೆಲ್ಲೋ ಅಲರ್ಟ್ ಇರಲಿದೆ. ಕರಾವಳಿಯಲ್ಲಿ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.