ಶ್ರೀ ರಾಘವೇಂದ್ರತೀರ್ಥರ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಹೊರತಂದಿರುವ ‘ಸುಯತಿವರ’ ವಿಶೇಷ ಪುರವಣಿಯನ್ನು ಮಂತ್ರಾಲಯದಲ್ಲಿ ಆಯೋಜಿಸಿದ್ದ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬಿಡುಗಡೆಗೊಳಿಸಿದರು.  
ಜಿಲ್ಲೆ

ರಾಯರು ಸತ್ಯ, ಧರ್ಮದ ಸಂರಕ್ಷಕರು

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳು ಸತ್ಯ, ಧರ್ಮದ ಸಂರಕ್ಷಕರಾಗಿದ್ದಾರೆ. ವಿಶ್ವದಲ್ಲಿ ಜಾತಿ, ಭಾಷೆ, ಪ್ರಾಂತಗಳಿಗೆ ಅತೀತರಾದ ಗುರುಗಳು ಇವರು. ತಮ್ಮ ಯೋಗ ಶಕ್ತಿಯ ಮೂಲಕ ಭಕ್ತರ ಹೃದಯದಲ್ಲಿ ಆಸೀನರಾಗಿದ್ದಾರೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದರು.

ಶ್ರೀ ರಾಘವೇಂದ್ರಸ್ವಾಮಿ ಮಠದ ಯೋಗೀಂದ್ರ ಸಭಾ ಮಂಟಪದಲ್ಲಿ ರಾಯರ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ದಿನವಾದ ಗುರುವಾರ ರಾತ್ರಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಿದರು.

ಲೋಕದಲ್ಲಿ ಅನೇಕ ಗುರುಗಳಿದ್ದಾರೆ. ಆದರೆ, ಗುರುರಾಯರಂತಹ ಗುರುಗಳು ದೊರೆಯುವುದು ವಿರಳ. ಭಕ್ತರಲ್ಲಿನ ದುಗುಡ, ದುಮ್ಮಾನಗಳನ್ನು ನಿವಾರಿಸಿ ಸನ್ಮಾರ್ಗದಲ್ಲಿ ನಡೆಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಶಾಂತಿ, ಸೌಹಾರ್ದವನ್ನು ಸಾರಿ ರಾಯರು ಭಕ್ತರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ರಾಯರಲ್ಲಿ ಗುರುತ್ವ ಶಕ್ತಿಯಿದೆ. ಭೂಮಿಗೆ ಗುರುತ್ವಾಕರ್ಷಣೆ ಶಕ್ತಿ ಇರುವಂತೆ ರಾಯರೂ ಮನುಷ್ಯನಲ್ಲಿನ ಅಹಂಕಾರ ತೆಗೆದು ಸದ್ಭೋಧನೆ ಕೆಲಸ ಮಾಡುತ್ತಿದ್ದಾರೆ.

ಮುಂದಿನ ಮತ್ತು ಹಿಂದಿನ ಗುರುಗಳು ರಾಯರಲ್ಲಿ ಸಮ್ಮಿಲಿತರಾಗಿ ಭಕ್ತರನ್ನು ಕಾಪಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲರೂ ಅವರವರ ಧರ್ಮವನ್ನು ಪಾಲಿಸುವ ಮೂಲಕ ಶಾಂತಿ, ಸೌಹಾರ್ದ ಕಾಪಾಡಬೇಕು. ಉತ್ತಮ ಮಳೆ, ಬೆಳೆಯಾಗಿ ಎಲ್ಲರೂ ಶಾಂತಿ, ನೆಮ್ಮದಿಯಿಂದ ಜೀವಿಸಲಿ ಎಂದು ರಾಯರಲ್ಲಿ ಪ್ರಾರ್ಥಿಸುತ್ತೇವೆ ಎಂದು ಡಾ.ಸುಬುಧೇಂದ್ರ ತೀರ್ಥರು ಹೇಳಿದರು.

ನಾಲ್ವರು ಸಾಧಕರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ

ಶ್ರೀಮಠದಿಂದ ನೀಡಲಾಗುವ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಕರ್ನಾಟಕದ ವಿದ್ವಾನ್ ರಾಮ ವಿಠ್ಠಲಾಚಾರ್ಯ, ಆಂಧ್ರದ ವಿದ್ವಾನ್ ಗರಕಿಪಾಟಿ ನರಸಿಂಹರಾವ್, ಮುಂಬೈನ ಟಾಟಾ ಸನ್ಸ್ ಕಾರ್ಯಾಧ್ಯಕ್ಷ ಎನ್.ಚಂದ್ರಶೇಖರನ್ ಮತ್ತು ಪುಣೆಯ ಎಂಐಟಿ ವರ್ಲ್ಡ್ ಪೀಸ್ ವಿವಿ ಅಧ್ಯಕ್ಷ ಡಾ.ವಿಶ್ವನಾಥ ಕರಾಡ್​ಗೆ ಪ್ರದಾನ ಮಾಡಲಾಯಿತು. ಶ್ರೀಮಠದಿಂದ ಪ್ರಕಟಿಸಲಾದ ಪರಿಮಳ ಗ್ರಂಥದ ಏಳನೇ ಆವೃತ್ತಿ, ಕಲಿಯುಗದ ಕಲ್ಪತರು ಗ್ರಂಥದ 51ನೇ ಆವೃತ್ತಿ, ರಾಮಚರಿತ್ರ ಮಂಜಲಿ, ಸ್ತೋತ್ರ ಸಂಪುಟ, ರಾಘವೇಂದ್ರಸ್ವಾಮಿಗಳ ಚರಿತ್ರ ಪುಸ್ತಕಗಳನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.