ಬೆಂಗಳೂರು:ಹೊಸ ಬಿಪಿಎಲ್, ಎಪಿಎಲ್ ಕೋರಿ ಆಹಾರ ಇಲಾಖೆಗೆ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಅನುಮತಿ ಸಿಗುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೆ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ.
ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಅರ್ಜಿಗಳ ವಿಲೇಗೆ ಅನುಮತಿ ನೀಡುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹಿಂದೊಮ್ಮೆ ಹೇಳಿದ್ದರು. ಇದೀಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇದು ಮುಗಿದ ಬಳಿಕ ಸರ್ಕಾರ, ಅರ್ಜಿ ವಿಲೇಗೆ ಅನುಮತಿ ನೀಡಲಿದೆ.
ಹೊಸ ರೇಷನ್ ಕಾರ್ಡ್ ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳು ಬಾಕಿ ಉಳಿದಿವೆ. ಸರ್ಕಾರ ಅನುಮತಿ ಕೊಟ್ಟರೆ "ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ' ಎಂಬ ಸೂತ್ರ ಅಳವಡಿಸಿಕೊಂಡು ಇಲಾಖೆ, ಅರ್ಜಿ ವಿಲೇವಾರಿ ಮಾಡಲಿದೆ. ರೇಷನ್ ಕಾರ್ಡ್ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಸೆ.1ರಿಂದ 10ರವರೆಗೆ ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಓನ್ ಹಾಗೂ ಕರ್ನಾಟಕ ಓನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಬಹುದು. ಈಗ ಅದನ್ನು ಸ್ಥಗಿತಗೊಳಿಸಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,92,54,052 ಫಲಾನುಭವಿಗಳಿಗೆ 1,16,98,551 ರೇಷನ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 13,27,882 ಬಿಪಿಎಲ್ ಕೊಡಲಾಗಿದೆ.