ಬೆಳ್ತಂಗಡಿ: ಸನಾತನ ಧರ್ಮದ ಮೂಲ ನಂದಿ. ನಂದಿ ಸಂತತಿ ಉಳಿಯದಿದ್ದರೆ ಗೋವಂಶ ಉಳಿಯದು. ಸ್ವಚ್ಛ ಭೂಮಿ, ಶುದ್ಧ ಗಾಳಿ, ಪರಿಸರ, ಮಣ್ಣು, ನೀರು ಉಳಿಸಲು ನಂದಿ ವಂಶ ಬೇಕು. ದೇವಸ್ಥಾನ, ಮಠಮಂದಿರಗಳು ಗೋವಂಶ ಉಳಿಸಬೇಕು ಎಂದು ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಭಕ್ತಿಭೂಷಣ್ ದಾಸ್ ಹೇಳಿದರು.
ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ಹೊರಟ ನಂದಿ ರಥಯಾತ್ರೆಯನ್ನು ಉಜಿರೆಯಲ್ಲಿ ಸ್ವಾಗತಿಸಿ ಮಾತನಾಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋ ಸಂತತಿ ವೃದ್ಧಿಯ ಜತೆಗೆ ನಂದಿಯ ಉಳಿವಿಗೆ ಜಾಗೃತಿ, ಮಹತ್ವ ಕಡಿಮೆಯಾಗಿದೆ ಎಂದರು.
ಸುಭಾಸ್ ಕಳೆಂಜ ಮಾತನಾಡಿದರು. ಬೆಳ್ತಂಗಡಿಯ ರಮೇಶ್ ಆರ್.ಕಳೆಂಜ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್(ನಂದಗೋಕುಲ ಗೋಶಾಲೆ) ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ಉಪಸ್ಥಿತರಿದ್ದರು. ಉಷಾಕಿರಣ್ ಕಾರಂತ್ ಸ್ವಾಗತಿಸಿದರು. ನವೀನ ನೆರಿಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.
ಬೆಳಾಲು ಕ್ರಾಸ್‌ನಿಂದ ಮೆರವಣಿಗೆ
ಉಜಿರೆಯ ಬೆಳಾಲು ಕ್ರಾಸ್‌ನಲ್ಲಿ ಭವ್ಯ ಮೆರವಣಿಗೆಯನ್ನು ಬರಮಾಡಿಕೊಳ್ಳಲಾಯಿತು. ದೇಸಿ ಗೋ ಸಂರಕ್ಷಕ ರಮೇಶ್ ಎಸ್. ಬೆಳ್ತಂಗಡಿ ವೈಭವದ ನಂದಿ ರಥಯಾತ್ರೆಗೆ ಚಾಲನೆ ನೀಡಿದರು. ಪದ್ಮನಾಭ ಶೆಟ್ಟಿಗಾರ್, ಭರತ್ ಕುಮಾರ್, ಲಕ್ಷ್ಮಣ ಸಪಲ್ಯ, ರವೀಂದ್ರ ಶೆಟ್ಟಿ, ರಾಮಚಂದ್ರ ಶೆಟ್ಟಿ, ಕೇಶವ ಭಟ್ ಅತ್ತಾಜೆ, ರಮೇಶ್ ಭಟ್ ಅತ್ತಾಜೆ, ಅರವಿಂದ ಕಾರಂತ್, ರವಿಕುಮಾರ್ ಬರಮೇಲು, ವಿನಯ ಚಂದ್ರ, ಜಗದೀಶ್ ಪ್ರಸಾದ್, ವಿದ್ಯಾಕುಮಾರ್ ಕಾಂಚೋಡು, ಪುಷ್ಪಾವತಿ ಆರ್.ಶೆಟ್ಟಿ ಮತ್ತು ನಾಗರಿಕರು ಹಾಗೂ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು. ರಾತ್ರಿ ಉಜಿರೆಯಲ್ಲಿ ವಾಸ್ತವ್ಯವಿದ್ದು ಬುಧವಾರ ಬೆಳಗ್ಗೆ ರಥ ವೇಣೂರಿಗೆ ತೆರಳಿತು.