ಬಳ್ಳಾರಿ ನಗರದಲ್ಲಿರುವ ಸಸ್ಯಪಾಲನಾ ಕೇಂದ್ರದಲ್ಲಿ ಮಾರಾಟಕ್ಕೆ ಸಿದ್ಧಗೊಂಡಿರುವ ಸಸಿಗಳು.  
ಜಿಲ್ಲೆ

ದರ ಹೆಚ್ಚಳದಿಂದ ಹೈರಾಣಾದ ಅನ್ನದಾತ

ರುದ್ರಪ್ಪ ವಾಲಿ

ಹೀರಾನಾಯ್ಕ ಟಿ.ಬಳ್ಳಾರಿ
ಅರಣ್ಯ ಇಲಾಖೆಯಿಂದ ಪ್ರತಿ ವರ್ಷವೂ ರಿಯಾಯಿತಿ ದರದಲ್ಲಿ ರೈತರಿಗೆ ನೀಡುವ ಸಸಿಗಳ ದರದಲ್ಲಿ ಹೆಚ್ಚಳಗೊಂಡಿದೆ. ಉತ್ಪಾದನೆ ಹಾಗೂ ನಿರ್ವಹಣೆ ವೆಚ್ಚ ಹೆಚ್ಚಿದ ಹಿನ್ನೆಲೆ ಇಲಾಖೆಯೂ ಈ ಬಾರಿ ದರದಲ್ಲಿ ಏರಿಕೆ ಮಾಡಿದ್ದು, ಇದು ರೈತರಿಗೆ ಹೊರೆಯಾಗಲಿದೆ.

ಬಳ್ಳಾರಿ ಜಿಲ್ಲೆಯಲ್ಲಿ 5.51 ಲಕ್ಷ ಸಸಿಗಳನ್ನು ನೆಡುವ ಉದ್ದೇಶ ಹೊಂದಿದ್ದು, ಜೂನ್ ಮೊದಲ ವಾರದಿಂದ ರೈತರಿಗೆ ಸಸಿಗಳ ವಿತರಣೆ ಕಾರ್ಯ ನಡೆಯಲಿದೆ. ಸಾರ್ವಜನಿಕರಿಗೆ ಸಸಿಗಳ ವಿತರಣೆಗೆ ಈಗಾಗಲೇ ಸಸ್ಯಪಾಲನಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.

ಅರಣ್ಯ ಇಲಾಖೆಯು ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವ ಯೋಜನೆ (ಆರ್‌ಎಸ್‌ಪಿಡಿ) ಅಡಿಯಲ್ಲಿ ವಿತರಿಸುವ ಸಸಿಗಳಿಗೆ ಈ ವರ್ಷ ರಿಯಾಯಿತಿಯನ್ನು ಕಡಿತಗೊಳಿಸಿದೆ.

ಸಸಿಗಳಿಗೆ ಶೇ.80-90ರ ವರೆಗೆ ಇದ್ದ ರಿಯಾಯಿತಿ ದರ ಇದೀಗ ಶೇ.50ಕ್ಕೆ ಇಳಿಸಲಾಗಿದೆ. ವಿವಿಧ ಅಳತೆಯ ಸಸಿಗಳಿಗೆ ರೈತರು ಪ್ರತಿ ವರ್ಷ ಪಾವತಿಸುತ್ತಿದ್ದ ದರದಲ್ಲಿ ಏರಿಕೆ ಆಗಿದೆ. ಇದರಿಂದ ಅರಣ್ಯ ಇಲಾಖೆ ಈ ಬಾರಿ ಸಸಿ ಮಾರಾಟ ಮಾಡುವುದು ಕೂಡ ಕಷ್ಟ ಎನ್ನುವಂತಾಗಿದೆ.

ಎಷ್ಟೆಷ್ಟು ದರ ಹೆಚ್ಚಳ ?

ಜಿಲ್ಲೆಯಲ್ಲಿ ಸಾರ್ವಜನಿಕರಿಗಾಗಿ 2.34 ಲಕ್ಷ ಸಸಿ ವಿತರಣೆಗೆ ಸಿದ್ಧವಾಗಿದೆ. ಕಳೆದ ಸಾಲಿನಲ್ಲಿ ಪ್ರತಿ ಅರಣ್ಯ ಸಸಿಗಳಿಗೆ (ಸಣ್ಣ ಸಸಿಗಳು) 1 ರೂ. ಮತ್ತು ದೊಡ್ಡ ಸಸಿಗಳಿಗೆ 3 ರೂ. ನಂತೆ ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ಈ ವರ್ಷ 69 ಸಸಿಗಳಿಗಿದ್ದ 1 ರೂ. ದರನ್ನು 6 ರೂ.ಗೆ ಹೆಚ್ಚಿಸಲಾಗಿದೆ. ಅದರಂತೆ 812 ಅಳತೆಯ ಸಸಿಗಳಿಗೆ 23 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 58, 1420 ಅಳತೆಯ ಸಸಿಗಳನ್ನು ಅರಣ್ಯ ಇಲಾಖೆಯಿಂದಲೇ ನೆಡುತೋಪು ನಿರ್ಮಾಣ, ಸಾರ್ವಜನಿಕ ಜಾಗದಲ್ಲಿ ಅರಣ್ಯಾಭಿವೃದ್ಧಿಗೆ ಬಳಸಲಾಗುತ್ತಿದೆ.

ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್ ಅರಣ್ಯ

ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್‌ನಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಶೇ.23 ರಿಂದ ಶೇ.24 ರಷ್ಟು ಅರಣ್ಯವನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷವೂ 5.51 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಈ ಬಾರಿಯೂ ಜಿಲ್ಲೆಯ ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ 1.6 ಲಕ್ಷ ಸಸಿಗಳನ್ನು ರೈತರಿಗೆ ವಿತರಿಸಲು ಸಿದ್ಧತೆ ನಡೆದಿದೆ. ಅದರಂತೆ ಸಂಡೂರು ಉತ್ತರ ವಲಯದಲ್ಲಿ 64 ಸಾವಿರ ಮತ್ತು ಸಂಡೂರು ದಕ್ಷಿಣ ವಲಯದಲ್ಲಿ 64 ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. 3.17 ಲಕ್ಷ ಸಸಿಗಳನ್ನು ಅರಣ್ಯ ಇಲಾಖೆಯಿಂದ ನೆಡುವ ಗುರಿ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಸಿಗಳ ಉತ್ಪಾದನೆ ವೆಚ್ಚ ಏರಿಕೆ

ಸಸಿಗಳ ಅಭಿವೃದ್ಧಿಗೆ ಉತ್ಪಾದನೆ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ರಸಗೊಬ್ಬರಗಳ ಬಳಕೆ, ಸಸಿ ನಿರ್ವಹಣೆ, ಸರಕು ಸಾಗಣೆ ವೆಚ್ಚದಲ್ಲಿ ಹೆಚ್ಚಳಗೊಂಡ ಹಿನ್ನೆಲೆ ಸಸಿಗಳ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಸಸಿಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ವರ್ಷ 58 ಅಳತೆಯ ಸಸಿಗೆ 7.23 ರೂ. ಉತ್ಪಾದನೆ ವೆಚ್ಚವಿದ್ದರೆ, ಪ್ರಸ್ತುತ 9.73 ರೂ. ಇದೆ. ಅದರಂತೆ 69 ಅಳತೆಯ ಸಸಿಗೆ 9.88 ರೂ.ನಿಂದ 12.88 ರೂ., 8*12 ಅಳತೆಯ ಸಸಿಗಳಿಗೆ 26.29 ರೂ.ನಿಂದ 32.29 ರೂ. ವರೆಗೆ ಉತ್ಪಾದನೆ ವೆಚ್ಚ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ಖಾಸಗಿ ನರ್ಸರಿಗಳಲ್ಲಿ ಇನ್ನೂ ದುಬಾರಿ

ವರ್ಷದಿಂದ ವರ್ಷಕ್ಕೆ ಖಾಸಗಿ ಸಸಿ ಉತ್ಪಾದಿಸುವ ನರ್ಸರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ನರ್ಸರಿಗಳಲ್ಲಿ ತೋಟಗಾರಿಕೆ ಹಾಗೂ ಅರಣ್ಯ ಸಸಿಗಳಿಗೆ ದುಬಾರಿ ದರ ತೆತ್ತಬೇಕಿದೆ. ಪ್ರತಿವರ್ಷವೂ ಕೂಲಿದರ ಹೆಚ್ಚಳ, ಕೂಲಿ ಕಾರ್ಮಿಕರ ಅಭಾವದಿಂದ ಕೃಷಿ ಜಮೀನುಗಳಲ್ಲಿ ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳನ್ನು ಬೆಳೆಯುವವರ ಸಂಖ್ಯೆ ಅಧಿಕವಾಗುತ್ತಿದೆ. ಇದರಿಂದ ಖಾಸಗಿ ನರ್ಸರಿಗಳ ಮೊರೆ ಹೋಗುವ ರೈತರ ಜೇಬಿಗೆ ಕತ್ತರಿ ಬೀಳುತ್ತಿದೆ. ಅದಕ್ಕೆ ಹೋಲಿಸಿದರೆ ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಯಿಂದ ನೀಡುವ ಸಸಿಗಳ ದರದಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಇಲಾಖೆಯಿಂದ ನೀಡುವ ಸಸಿಗಳ ಬೆಲೆ ಕಡಿಮೆ ಇರುತ್ತದೆ.

ಯಾವ್ಯಾವ ಸಸಿಗಳು ಲಭ್ಯ

ಹೆಬ್ಬೇವು, ಮಹಾಗಣಿ, ಸಿಲ್ವರ್‌ಓಕ್, ರಕ್ತ ಚಂದನ, ನೇರಳೆ, ಕರಿಬೇವು, ಬೇವು, ನೆಲ್ಲಿ, ನುಗ್ಗೆ, ಪೇರಲ, ಶ್ರೀಗಂಧ, ಬಿದಿರು, ಹುಣಸೆ, ತೇಗ ಅರಣ್ಯ ಸಸಿಗಳು ರೈತರಿಗಾಗಿ ಲಭ್ಯ ಇದೆ.

ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 5.51 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಅದರಲ್ಲಿ 3.17 ಲಕ್ಷ ಸಸಿಗಳನ್ನು ಇಲಾಖೆಯಿಂದಲೇ ನೆಡಲಾಗುವುದು. ಉಳಿದಂತೆ 2.34 ಲಕ್ಷ ಸಸಿಗಳನ್ನು ರೈತರಿಗೆ ವಿತರಿಸಲು ಸಿದ್ಧತೆ ನಡೆದಿದೆ. ಜೂನ್ ಮೊದಲ ವಾರದಿಂದ ವಿತರಿಸಲಾಗುವುದು. ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ನೀಡಿ ಸಸಿಗಳನ್ನು ಪಡೆಯಬಹುದು.


ಸಂದೀಪ್ ಸೂರ್ಯವಂಶಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ