More

    ಒಣಗುತ್ತಿವೆ ಅರಣ್ಯ ದ ಗಿಡ-ಮರಗಳು!

    ಸಿದ್ದಾಪುರ: ಅತಿಯಾದ ತಾಪಮಾನದಿಂದಲೋ ಅಥವಾ ಯಾವುದೋ ಕೀಟಬಾಧೆಯೋ ಏನೋ ಬೆಲೆಬಾಳುವ ಗಿಡಮರಗಳು ಒಣಗಿ ಅರಣ್ಯ ಪ್ರದೇಶ ಬಯಲಾಗುತ್ತಿದೆ ಎಂದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

    ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಹೊನ್ನೆಹದ್ದ ಗ್ರಾಮದ ಕೊಳ್ಗಿಜಡ್ಡಿ ಸಮೀಪ ಅರಣ್ಯ ಸರ್ವೇ ನಂ. 48ರಲ್ಲಿ ಬೆಲೆಬಾಳುವ ಗಿಡ-ಮರಗಳು, ಸಣ್ಣ ಸಣ್ಣ ವಿವಿಧ ಜಾತಿಯ ಗಿಡಬಳ್ಳಿಗಳು ಒಣಗುತ್ತಿದ್ದು, ಅರಣ್ಯವನ್ನು ಉಳಿಸಿಕೊಳ್ಳುವುದಕ್ಕೆ ಇಲಾಖೆ ತಜ್ಞರ ಸಲಹೆ ಪಡೆದು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

    ಸಾಲದೂಪ, ಹಣಗೇರಿ, ಉಪ್ಪಾಗೆ, ಕರಿವಾಳ, ತಾರೆ, ಹೈಗು, ಹೊಳಗೇರಿ ಸೇರಿದಂತೆ ವಿವಿಧ ಜಾತಿಯ ಗಿಡಮರಗಳ ಎಲೆಗಳು ಒಣಗಿ ಬೀಳುತ್ತಿವೆ. ಒಣಗಿದ ಎಲೆ ಸುರುಟು ಸುರುಟಾಗಿದ್ದು ಅದರ ಒಳಗಡೆ ಸೊಳ್ಳೆಯಂತೆ ಕಾಣುವ ನೊಣ ತುಂಬಿಕೊಂಡಿರುತ್ತವೆ. ಅಲ್ಲದೆ, ಎಲೆಯ ಹಿಂಭಾಗದಲ್ಲಿ ಬಸವನ ಹುಳುವಿನ ಗೂಡಿನಂತಿದ್ದು ಅದರಿಂದ ಹುಳ ಹೊರಬಂದು ಎಲೆಯಲ್ಲಿನ ರಸವನ್ನು ಹೀರುವುದರಿಂದ ಎಲೆಗಳು ಉದುರಿ ಮರಗಳು ಅಸ್ತಿಪಂಜರದಂತೆ ಕಂಡುಬರುತ್ತಿವೆ.

    ಮರಗಳ ಟೊಂಗೆಯಲ್ಲಿನ ರಸವನ್ನು ನೊಣಗಳು ಹೀರುತ್ತಿರುವುದರಿಂದ ಗಿಡ-ಮರಗಳು ಒಣಗುತ್ತಿದೆ. ಕಳೆದ ಒಂದು ವಾರದಲ್ಲಿ ಸುಮಾರು ಎಂಟರಿಂದ ಹತ್ತು ವಿವಿಧ ಜಾತಿಯ ಮರಗಳು ಒಣಗಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಇದೊಂದು ರೋಗವೋ, ಯಾವುದಾದರೂ ಕೀಟ ಬಾಧೆಯೋ, ಹವಾಮಾನ ವೈಪರೀತ್ಯ ಕಾರಣವೋ… ಮಳೆ ಬೀಳದಿರುವುದರಿಂದ ಹೀಗಾಗಿದೆಯೋ ತಿಳಿಯದಂತಾಗಿದೆ ಎಂದು ಸ್ಥಳೀಯರಾದ ದಿನೇಶ ಹೆಗಡೆ, ಜನಾರ್ಧನ ಗೌಡ, ಧರ್ಮ ಗೌಡ ಇತರರು ಹೇಳುತ್ತಾರೆ.


    ಕೊಳ್ಗಿಜಡ್ಡಿ ಅರಣ್ಯದಲ್ಲಿ ಒಂದು ವಾರದಿಂದ ಮರಗಳು ಈ ರೀತಿ ಒಣಗುತ್ತಿವೆೆ. ಒಂದೇ ವಾರದಲ್ಲಿ ಹತ್ತಕ್ಕೂ ಹೆಚ್ಚು ವಿವಿಧ ಜಾತಿಯ ಗಿಡ-ಮರಗಳ ಎಲೆಗಳು ಒಣಗಿಬೀಳುತ್ತಿದೆ. ಇದರಿಂದ ಮರಗಳು ಸತ್ವ ಕಳೆದುಕೊಂಡು ಅಸ್ತಿಪಂಜರದಂತೆ ಕಂಡುಬರುತ್ತಿದ್ದು ಸಂಬಂಧ ಪಟ್ಟ ಅರಣ್ಯ ಇಲಾಖೆ ಈ ಕುರಿತು ಜಾಗೃತಿವಹಿಸಿ ಗಿಡ-ಮರಗಳ ರಕ್ಷಣೆಗೆ ಮುಂದಾಗಬೇಕಿದೆ.

    — ವೆಂಕಟರಮಣ ನಾಯ್ಕ ಮಾದಲಮನೆ, ಸ್ಥಳೀಯ ನಿವಾಸಿ

    ಗಿಡ-ಮರಗಳು ಒಣಗುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಜ್ಞರನ್ನು ಸ್ಥಳಕ್ಕೆ ಕರೆಸಿ ಇದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುವುದು.

    — ಸಿ.ಎನ್. ಹರೀಶ, ಎಸಿಎಫ್ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts