More

    ಹಾಡಿಯಲ್ಲಿ ಹನಿ ನೀರಿಗೂ ಪರದಾಟ

    ಎಚ್.ಡಿ.ಕೊಟೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಕುಡಿಯುವ ನೀರು ನೀಡಲು ಪ್ರತಿವರ್ಷ ಬಜೆಟ್‌ನಲ್ಲಿ ಕೋಟಿ ಕೋಟಿ ರೂ. ಮೀಸಲಿಡುತ್ತಾರೆ. ಆದರೂ ಕುಡಿಯುವ ನೀರಿಗೆ ಮಾತ್ರ ಬರ ತಪ್ಪಿಲ್ಲ. ಅದರಲ್ಲೂ ಆದಿವಾಸಿಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರೂ ಗಿರಿಜನರ ಬದುಕು ಹಸನಾಗಿಲ್ಲ.

    ಕೇಂದ್ರ ಸರ್ಕಾರ ಮನೆಮನೆಗೆ ಕುಡಿಯುವ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆ ಜಾರಿಗೆ ತಂದು ನಲ್ಲಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಿದ್ದರೂ ಒತ್ತಡಕ್ಕೋ ಆಥವಾ ರಾಜಕೀಯ ಕಾರಣಕ್ಕೋ ಜಲಜೀವನ್ ಮಿಷನ್ ಕಾಮಗಾರಿ ಚಾಲನೆಯಲ್ಲಿದೆ. ಆದರೆ ಶತಶತಮಾನಗಳಿಂದ ನೀರು, ಬೆಳಕು ಕಾಣದ ಆದಿವಾಸಿ ಸಮುದಾಯ ವಾಸ ಮಾಡುವ ಹಾಡಿಗಳಿಗೆ ಇನ್ನೂ ಮೂಲಸೌಕರ್ಯಗಳನ್ನು ನೀಡದೆ ಇರುವುದು ಮಾತ್ರ ವಿಪರ್ಯಾಸವೇ ಸರಿ. ಅಂತಹ ಒಂದು ಹಾಡಿಗಳಲ್ಲಿ ಒಂದಾದ ಮೈಸೂರು-ಗದ್ದಿಗೆ ಮುಖ್ಯರಸ್ತೆಯಲ್ಲಿರುವ ಚಾಮನಹಳ್ಳಿಹುಂಡಿ ಹಾಡಿಯ ಜನರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ.

    ನಾಗರಿಕ ಸಮಾಜದ ಮಧ್ಯೆ ಇರುವ ಈ ಹಾಡಿಯ ಜನರ ಪರಿಸ್ಥಿತಿ ಹೀಗಾದರೆ ಕಾಡಂಚಿನ, ಕಾಡಿನ ಒಳಗೆ ವಾಸ ಮಾಡುತ್ತಿರುವ ವನವಾಸಿಗಳ ಬದುಕು ಯಾವ ರೀತಿ ಇದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎ ಮತ್ತು ಬಿ ಹಾಡಿಯಲ್ಲಿ ಸುಮಾರು 60 ರಿಂದ 65 ಜೇನು ಕುರುಬ ಕುಟುಂಬಗಳು 40-45 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. 1970-71ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂರ್ಕಲ್ ಅರಣ್ಯ ಪ್ರದೇಶದಿಂದ ಒಕ್ಕಲು ಎಬ್ಬಿಸಿದ ಪರಿಣಾಮ ಅಂದು ಕಾಡು ಬಿಟ್ಟು, ನಾಡಿಗೆ ಬಂದ ಸಮುದಾಯ ಇಂದು ಇದೇ ವಾತಾವರಣದಲ್ಲಿ ಜೀವಿಸುತ್ತಿದೆ.

    ಬಹುತೇಕ ಕುಟುಂಬಗಳು ಕೂಲಿಯನ್ನು ನಂಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು, ಕೂಲಿಗಾಗಿ ಕೊಡಗು, ಕೇರಳಕ್ಕೆ ಹೋಗುತ್ತಾರೆ. ಎರಡು ಹಾಡಿಯಲ್ಲಿ ವಾಸ ಮಾಡುವ ಬಹುತೇಕ ಕುಟುಂಬಕ್ಕೆ ತುಂಡು ಭೂಮಿ ಇಲ್ಲ. ಹಾಡಿಯಲ್ಲಿ ಎರಡು ಬೋರ್‌ವೆಲ್ ಇದ್ದು ಕೆಟ್ಟು ನಿಂತರೆ ಕುಡಿಯುವ ನೀರಿಗೆ ಕಿ.ಮೀ.ಗಟ್ಟಲೇ ಸಾಗಬೇಕು. ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಹಲವು ಬಾರಿ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಕೇವಲ ಸರ್ಕಾರಿ ಕಚೇರಿಗಳ ಮುಂದಿನ ಜಾಹೀರಾತು ಹಾಗೂ ಟಿವಿ, ಪತ್ರಿಕೆಗಳಲ್ಲಿ ಬಿಟ್ಟಿ ಪ್ರಚಾರ ಮಾಡಲು ಮಾತ್ರ ಬಳಕೆಯಾಗುತ್ತಿದೆ ಎನ್ನುತ್ತಾರೆ ವನವಾಸಿಗಳು.

    ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡಲಾಗದ ಸರ್ಕಾರಗಳು ಇನ್ನುಳಿದ ಮೂಲಸೌಕರ್ಯಗಳನ್ನು ಹೇಗೆ ತಾನೆ ನೀಡಬಲ್ಲವು? ಮನುಷ್ಯನಿಗೆ ಕುಡಿಯುವ ನೀರು ಅತ್ಯವಶ್ಯವಾಗಿದ್ದು ಅದನ್ನು ಸಹ ನೀಡದೆ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆದಿವಾಸಿ ಮುಖಂಡರು ಆರೋಪಿಸಿದ್ದಾರೆ.

    ಹಕ್ಕು ಪತ್ರ ನೀಡಿಲ್ಲ ನಲವತ್ತು ವರ್ಷಗಳ ಹಿಂದೆ ಅರಣ್ಯದಿಂದ ಬಂದ ಜೇನು ಕುರುಬ ಜನಾಂಗದವರು ಪಾಳು ಬಿದ್ದ ಜಾಗದಲ್ಲಿ ಗುಡಿಸಲು ನಿರ್ಮಿಸಿ ಜೀವನ ಕಟ್ಟಿಕೊಂಡರು. ನಂತರದ ದಿನಗಳಲ್ಲಿ ಸರ್ಕಾರದಿಂದ ಮನೆ ಮಂಜೂರು ಮಾಡಿಸಿಕೊಂಡು ಅದೇ ಜಾಗದಲ್ಲಿ ಕಳೆದ ನಲವತ್ತು ವರ್ಷಗಳಿಂದ ಜೀವನ ನಡೆಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಆದಿವಾಸಿಗಳು ವಾಸ ಮಾಡುತ್ತಿರುವ ಜಾಗಕ್ಕೆ ಹಕ್ಕು ಪತ್ರ ನೀಡಿಲ್ಲ. ಹೀಗಾಗಿ ಈ ಹಿಂದೆ ಮನೆ ಕಟ್ಟಲು ಅವಕಾಶ ನೀಡಿದ ಜಮೀನಿನ ಮಾಲೀಕರ ವಂಶಸ್ಥರ ಹೆಸರಿನಲ್ಲಿ ಈಗಲೂ ಆರ್‌ಟಿಸಿ ನಮೂದಾಗಿರುವುದರಿಂದ ನಾಳೆ ನಮಗೆ ತೊಂದರೆ ಆಗುತ್ತದೆಯೇ ಎಂಬ ಆತಂಕದಲ್ಲಿ ಆದಿವಾಸಿಗಳು ಇದ್ದಾರೆ. ಹಾಡಿಯ ಕೆಲವೇ ಮಂದಿಗೆ ಸರ್ಕಾರದ ವತಿಯಿಂದ ಜಮೀನು ಮಂಜೂರು ಆಗಿದೆ. ಇನ್ನುಳಿದ ಬಹುತೇಕ ಕುಟುಂಬಗಳಿಗೆ ಯಾವುದೇ ಜಮೀನು ಇಲ್ಲ. ಎಲ್ಲರೂ ಕೂಲಿ ಅವಲಂಬಿಸಿದ್ದಾರೆ.

    ತಾಲೂಕಿನ ಚಾಮನಹಳ್ಳಿ ಹುಂಡಿ ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಪಂಚಾಯಿತಿಯಿಂದ ಕುಡಿಯುವ ನೀರು ನೀಡಲು ಮನವಿ ಮಾಡಲಾಗಿದೆ. ಸ್ಮಶಾನ ಇದ್ದು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ತಹಸೀಲ್ದಾರ್‌ಗೆ ಪತ್ರ ಬರೆದು ಸ್ಮಶಾನ ಗುರುತಿಸಿದ ನಂತರ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಸಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುತ್ತದೆ.
    > ಜಿ.ಆರ್.ಮಹೇಶ್ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts