ಜಿಲ್ಲೆ

ಧರ್ಮಾತೀತ ಸೊಗಡಿಗೆ ಸಾವಿಲ್ಲ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ನಮ್ಮ ದೇಶದ ಪರಂಪರೆಯಲ್ಲಿ ಆಚರಿಸುವ ಪ್ರತಿಯೊಂದು ಹಬ್ಬ ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತದೆ. ಇವೆಲ್ಲ ಹಬ್ಬಗಳು ವಿವಿಧತೆಯಲ್ಲಿ ಏಕತೆ ಸಂದೇಶ ಸಾರುತ್ತವೆ. ಜಾತ್ಯತೀತ ಹಾಗೂ ಧರ್ಮಾತೀತ ಮಣ್ಣಿನ ಸೊಗಡಿಗೆ ಎಂದಿಗೂ ಸಾವಿಲ್ಲ ಎಂದು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಸತೀಶ ಎಂ.ನಾಯ್ಕ ಹೇಳಿದರು.

ಕುಂಭಾಶಿ-ಕೊರವಡಿಯಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕಜಾಪ ಉಡುಪಿ ಜಿಲ್ಲಾ ಘಟಕ ಹಾಗೂ ಕಜಾಪ ಕುಂದಾಪುರ ತಾಲೂಕು ಘಟಕದ ವತಿಯಿಂದ ಕೊರವಡಿ ರೋಟರಿ ಸಮುದಾಯ ದಳದ ಸಹಯೋಗದಲ್ಲಿ ಮಂಗಳವಾರ ಮಹಿಳೆಯರಿಗಾಗಿ ಸಂಕ್ರಾಂತಿ ಜಾನಪದ ಸಂಭ್ರಮ-25, ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕಜಾಪ ಜಿಲ್ಲಾ ಘಟಕ ಅಧ್ಯಕ್ಷ ಡಾ.ಗಣೇಶ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕುಂಭಾಶಿ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ ಸಮಾರಂಭ ಉದ್ಘಾಟಿಸಿದರು. ರಂಗೋಲಿ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು. ಕೊರವಡಿ ರೋಟರಿ ಸಮುದಾಯ ದಳ ಅಧ್ಯಕ್ಷ ಸುರೇಶ ವಿಠ್ಠಲವಾಡಿ, ಸ್ಥಾಪಕಾಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಕಜಾಪ ಉಡುಪಿ ಘಟಕ ಅಧ್ಯಕ್ಷೆ ಮಾಯಾ ಕಾಮತ್, ತೀರ್ಪುಗಾರರಾದ ಸಿಂಧು ಐತಾಳ್, ಕಲಾವಿದ ರವಿ ಕಟ್ಗೆರೆ ಇದ್ದರು.

ಕುಂದಾಪುರ ಘಟಕ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್ ಸ್ವಾಗತಿಸಿದರು. ಸಂಧ್ಯಾ ಹೆಗಡೆ ನಿರೂಪಿಸಿ, ಕಜಾಪ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್ ವಂದಿಸಿದರು.