ಬೆಂಗಳೂರು: ಇತ್ತೀಚೆಗೆ ಟಿವಿಶೋಗಳ ಹಾಸ್ಯದಲ್ಲಿ ಕೇವಲ ಡಬ್ಬಲ್ ಮೀನಿಂಗ್, ಅಶ್ಲೀಲ ಸಂಭಾಷಣೆ ಮಿತಿಮೀರಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಭಾನುವಾರ ರಂಗಸಂಸ್ಕೃತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಹಾಸ್ಯ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಕಗಳಲ್ಲಿ ರುದ್ರನಾಟಕ ರಚನೆಗಿಂತ ಹಾಸ್ಯ ನಾಟಕದ ರಚನೆ ಬಹಳ ಕಷ್ಟ. ಅದರಲ್ಲೂ ಅಶ್ಲೀಲ ಪದಬಳಕೆ ಇಲ್ಲದೆ ಪ್ರೇಕ್ಷಕರನ್ನು ನಗಿಸುವುದು ದೊಡ್ಡ ಸವಾಲು. ಅಂತಹ ಸವಾಲನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ದಿವಂಗತ ದಾಶರಥಿ ದೀಕ್ಷಿತರು ಯಶಸ್ವಿಯಾಗಿದ್ದರು. ಅವರ ಗಾಂಪರಗುಂಪು ನಾಟಕ ಆ ಕಾಲದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಅವರ ಪುತ್ರ ಲೋಕನಾಥ ದೀಕ್ಷಿತರು ಕೂಡಾ ತಂದೆಯ ಹಾದಿಯಲ್ಲೇ ಹಾಸ್ಯನಾಟಕ ರಚನೆ ಮತ್ತು ನಿರ್ದೇಶನದ ಮೂಲಕ ಪ್ರೇಕ್ಷಕರ ಮನಗೆದ್ದಿರುವುದು ಸಂತಸದ ವಿಷಯ.
ಇತ್ತೀಚೆಗೆ ಸ್ಟಾಂಡಿಂಗ್ ಕಾಮಿಡಿಯನ್‌ಗಳು, ಟಿವಿಶೋಗಳಲ್ಲಿ ತೀರಾ ಕೆಳಮಟ್ಟದ ಹಾಸ್ಯವನ್ನು ಬಳಸುತ್ತಿದ್ದಾರೆ. ಅದರ ಪ್ರಭಾವ ಕೆಲ ಹೊಸ ನಾಟಕಗಳ ಮೇಲೂ ಆಗುತ್ತಿದ್ದು, ಕುಟುಂಬ ಸಮೇತ ಕುಳಿತು ನಾಟಕ ನೋಡುವ ಪರಿಸ್ಥಿತಿ ಕಣ್ಮರೆಯಾಗುತ್ತಿದೆ ಎಂದು ನಾಗರಾಜಮೂರ್ತಿ ಕಳವಳ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ರಂಗಸಂಸ್ಕೃತಿ ಅಧ್ಯಕ್ಷ ಲೋಕನಾಥ ದೀಕ್ಷಿತ್, ಪ್ರಧಾನ ಕಾರ್ಯದರ್ಶಿ ಎಂ.ಲೋಕೇಶ್,ಲೀಲಾವತಿ, ಜಯಂತಿ ಮತ್ತಿತರರಿದ್ದರು. ನಂತರ ನಡೆದ ‘ಭಾಗವತರ ನಾಟಕ ಮಂಡಳಿ’ ನಾಟಕ ಪ್ರದರ್ಶನವು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.