ಜಿಲ್ಲೆ

ಬಿಸಿಲ ಧಗೆ, ಹಣ್ಣುಗಳಿಗೆ ಭಾರಿ ಬೇಡಿಕೆ :ರಮಜಾನ್ ಸಮಯದಲ್ಲಿ ಬೆಲೆಯೇರಿಕೆ ವಿದೇಶಿ ಫಲಗಳಿಗೂ ಹೆಚ್ಚಿದ ಡಿಮ್ಯಾಂಡ್

ಸೌಮ್ಯ ಆರ್

ಕುಂಬಳೆ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬಿಸಿಲು ಕಳವಳಕಾರಿಯಾಗುತ್ತಿದ್ದಂತೆ ಹಣ್ಣಿನ ಅಂಗಡಿಗಳಿಗೆ ಜನರು ಲಗ್ಗೆ ಇಡುತ್ತಿರುವುದು ಕಂಡುಬರುತ್ತಿದೆ. ರಮಜಾನ್ ಉಪವಾಸ ಕಾಲವು ಹಣ್ಣುಗಳ ಬೇಡಿಕೆ ಹೆಚ್ಚಿಸಿದ್ದು ಕಿತ್ತಳೆ, ಕಲ್ಲಂಗಡಿ ಮತ್ತು ಬೀಜರಹಿತ ದ್ರಾಕ್ಷಿಗಳು ಹೆಚ್ಚು ಮಾರಾಟವಾಗುತ್ತ್ತಿವೆ. ಎಳನೀರಿಗೂ ಬೇಡಿಕೆ ಇದೆ.

ಬೇಡಿಕೆ ಹೆಚ್ಚಾದಂತೆ, ಅನೇಕ ವಸ್ತುಗಳ ಬೆಲೆ ಹೆಚ್ಚಿದರೆ ಮತ್ತೆ ಕೆಲವು ತಗ್ಗಿದೆ. ವಿವಿಧ ಪ್ರದೇಶಗಳಲ್ಲಿ ಕಲ್ಲಂಗಡಿ ಹಣ್ಣಿನ ಚಿಲ್ಲರೆ ಬೆಲೆ ಕಿಲೋಗೆ 30-40 ರೂ.ಗಳವರೆಗೆ ಇದ್ದರೆ ದ್ರಾಕ್ಷಿಯ ಕಾಲವಾಗಿದ್ದರೂ ಬೆಲೆ 130 ರೂ. ವರೆಗೂ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ 160-190 ರೂ.ಗಳವರೆಗೂ ಮಾರಾಟವಾಗುತ್ತಿದೆ.

ಕಿತ್ತಳೆ ಹಣ್ಣಿನ ಬೆಲೆ ಪ್ರಸ್ತುತ ಪ್ರತಿ ಕಿಲೋಗೆ 150 ರೂ.ಗಳಿಂದ ಆರಂಭವಾಗುತ್ತದೆ. ನಾಗ್ಪುರ ಮತ್ತು ಮಧ್ಯಪ್ರದೇಶದಲ್ಲಿ ಋತು ಮುಗಿದಿರುವುದರಿಂದ ಕಿತ್ತಳೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸೀಸನ್‌ನಲ್ಲಿ ಒಂದೂವರೆ ಕಿಲೋ ಬೆಲೆ 100 ರೂ. ಇತ್ತು.

ವಿದೇಶಿ ಮತ್ತು ದೇಶಿ ಸೇಬು ಮಾರುಕಟ್ಟೆಗೆ ಪ್ರವೇಶಿಸಿದ್ದು ಸೇಬಿನ ಬೆಲೆ ಕೆಜಿಗೆ 230-340 ರೂ.ವರೆಗಿದೆ. ವಿವಿಧ ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಮಾವಿನಹಣ್ಣಿನ ಬೆಲೆ ಕಿಲೋಗೆ 160 ರೂ.ಗಳಿಂದ ಪ್ರಾರಂಭವಾಗುತ್ತದೆ. ಪೇರಳೆ 140 ರೂ. ಮತ್ತು ಅನಾನಸ್ 75 ರೂ.ವರೆಗಿದೆ. ಬಾಳೆಹಣ್ಣಿನ ಬೆಲೆ ಏರುತ್ತಿದೆ. ಹೈಪರ್‌ಮಾರ್ಕೆಟ್‌ಗಳು, ಸೂಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್‌ನಲ್ಲಿ ಬೆಲೆ ಇನ್ನೂ ಹೆಚ್ಚಿದೆ.

ರಸ್ತೆ ಬದಿ ಹಣ್ಣಿನ ಮಾರುಕಟ್ಟೆಗಳು ಸಕ್ರಿಯವಾಗಿದ್ದು ಹಣ್ಣಿನ ಲಭ್ಯತೆ ಅವಲಂಬಿಸಿ ಬೆಲೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಿವೆ. ಈ ವರ್ಷ ಹವಾಮಾನ ಬದಲಾವಣೆ ಕೃಷಿಯ ಮೇಲೆ ಪರಿಣಾಮ ಬೀರಿರುವುದರಿಂದ ಉತ್ಪಾದನೆ ಕಡಿಮೆಯಾಗಿದ್ದು ಆದಾಯಕ್ಕೂ ಹೊಡೆತ ಬಿದ್ದಿದೆ ಎನ್ನಲಾಗಿದೆ.

ಹೆಚ್ಚಿನ ಹಣ್ಣುಗಳು ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ಬರುತ್ತಿದ್ದು ಮಾರುಕಟ್ಟೆಯಲ್ಲಿ ವಿದೇಶಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.