ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್‌ಐಟಿಗೆ ವಹಿಸಿರುವ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ತಿಪ್ಪೆ ಸಾರಿಸುವ ಕೆಲಸ ಎಂದು ಟೀಕಿಸಿದರು.
ಯಾವ ತನಿಖೆಯೂ ಆಗಲ್ಲ. ಯಾರಿಗೂ ಶಿಕ್ಷೆಯೂ ಆಗಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ಭವಿಷ್ಯ ನುಡಿದರು. ಎಸ್‌ಐಟಿ ತನಿಖೆ ಮಾಡ್ತೀವಿ ಅಂತಾರೆ. ಆದರೆ, ಯಾರ ವಿರುದ್ಧ ತನಿಖೆ ಮಾಡ್ತಾರೆ? ಏನಂತ ತನಿಖೆ ಮಾಡ್ತಾರೆ? ಯಾವ ವಿಚಾರಗಳ ಆಧಾರದ ಮೇಲೆ ತನಿಖೆಗೆ ಆದೇಶ ಮಾಡ್ತಾರೆ? ಎಂದು ಪ್ರಶ್ನಿಸಿದರು.
ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ನಕಲಿ ಅಂತ ಬರಬಹುದು. ಈ ಹಿಂದೆಯೂ ಇಂತಹ ಅದೆಷ್ಟೋ ತನಿಖಾ ವರದಿಗಳು ಮೂಲೆ ಗುಂಪಾಗಿವೆ. ಮೇಟಿ ಪ್ರಕರಣದಲ್ಲೂ ಕ್ಲೀನ್ ಚಿಟ್ ಆಯ್ತು. ಇಂತಹ ಪ್ರಕರಣಗಳನ್ನು ನೈತಿಕವಾಗಿ ಎದುರಿಸಬೇಕು ಎಂದರು.
ನಮ್ಮ ಕುಟುಂಬಕ್ಕೂ ಇಂತಹ ಹಲವಾರು ವಿಚಾರಗಳು ಬಂದಿವೆ. ಆದರೆ ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಅಂತ ಹೇಳಿ ಕಳುಹಿಸಿದ್ದೇವೆ ಎಂದು ಎಚ್ಡಿಕೆ ತಿಳಿಸಿದರು. (ದಿಗ್ವಿಜಯ ನ್ಯೂಸ್)