More

    ಪಾಕ್​ಗೆ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ!

    ನವದೆಹಲಿ: ಗಡಿ ತಂಟೆ, ಭಯೋತ್ಪಾದನೆ ವಿಚಾರದಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ, ಈಗ ಭಾರತದಿಂದಲೇ ಉಚಿತವಾಗಿ ಕರೊನಾ ಲಸಿಕೆ ಪಡೆಯಲು ಸಜ್ಜಾಗಿದೆ! ಸೇರಂ ಇನ್​ಸ್ಟಿಟ್ಯೂಟ್ ಉತ್ಪಾದನೆ ಮಾಡಿರುವ 1.6 ಕೋಟಿ ಡೋಸ್ ಕರೊನಾ ಲಸಿಕೆ ಜೂನ್ ವೇಳೆಗೆ ಪಾಕಿಸ್ತಾನಕ್ಕೆ ಸಿಗಲಿದೆ ಎನ್ನಲಾಗಿದೆ.

    ಯುನೈಟೆಡ್ ಗ್ಲೋಬಲ್ ಅಲಯನ್ಸ್ ಫಾರ್ ವ್ಯಾಕ್ಸಿನ್ ಎಂಬ ಒಕ್ಕೂಟ ಬಡ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ವಿತರಿಸುವ ಕಾರ್ಯದಲ್ಲಿ ನಿರತವಾಗಿದೆ. ಒಟ್ಟು 92 ಬಡ ರಾಷ್ಟ್ರಗಳಿಗೆ ನಿಗದಿತ ಸಂಖ್ಯೆಯ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಿದೆ. ಈ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ ಕೂಡ ಇದೆ. ಈ ಒಕ್ಕೂಟ ಸೆರಂ ಇನ್​ಸ್ಟಿಟ್ಯೂಟ್​ನಿಂದ ಲಸಿಕೆ ಖರೀದಿ ಮಾಡಲಿದೆ. ಭಾರತದ ಈಗಾಗಲೇ 65ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಕಳಿಸಿಕೊಟ್ಟಿದೆ. ಆದರೆ ಪಾಕಿಸ್ತಾನಕ್ಕೆ ನೇರವಾಗಿ ಲಸಿಕೆ ನೀಡಿಲ್ಲ. ಕರೊನಾ ಸಾಂಕ್ರಾಮಿಕತೆಯ ಅಧಿಕ ಹಾವಳಿಯಿರುವ ಪಾಕಿಸ್ತಾನದ ನಗರಗಳಲ್ಲಿ ಮಾ.15ರಿಂದ ಶಾಲಾ-ಕಾಲೇಜ್​ಗಳನ್ನು ಮುಚ್ಚಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

    ಕ್ವಾಡ್ ನೆರವು ನಿರೀಕ್ಷೆ

    ಭಾರತದಲ್ಲಿ ಕರೊನಾ ಲಸಿಕೆ ಉತ್ಪಾದನೆ ಸಾಮರ್ಥ್ಯ ಹೆಚ್ಚಳಕ್ಕೆ ನೆರವಾಗಲು ನಾಲ್ಕು ದೇಶಗಳ ಕ್ವಾಡ್ ಕೂಟ ಹಣಕಾಸು ಒದಗಿಸುವ ಸಂಭವವಿದೆ. ಶುಕ್ರವಾರ ವರ್ಚುವಲ್ ಸಭೆ ನಡೆಯಲಿದ್ದು ಅದರಲ್ಲಿ ಹಣಕಾಸು ಒಪ್ಪಂದ ಕುರಿತು ನಿರ್ಧಾರ ಕೈಗೊಳ್ಳುವ ಸಂಭವವಿದೆ. ಇದು ಕ್ವಾಡ್ ಕೂಟದ ನಾಯಕರ ಪ್ರಥಮ ಸಭೆ ಯಾಗಲಿದೆ. ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಅಮೆರಿಕ- ಕ್ವಾಡ್ ಕೂಟದ ಸದಸ್ಯ ದೇಶಗಳಾಗಿವೆ. ಲಸಿಕೆ ಉತ್ಪಾದನೆಯಲ್ಲಿನ ಕೊರತೆ ನೀಗಿಸುವುದು, ಲಸಿಕೆ ಅಭಿಯಾನದ ವೇಗ ಹೆಚ್ಚಿಸುವುದು ಮತ್ತು ಕರೊನಾ ವೈರಸ್​ನ ಕೆಲವು ರೂಪಾಂತರಿ ಪ್ರಭೇದಗಳನ್ನು ಸೋಲಿ ಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.

    18 ಸಾವಿರ ಹೊಸ ಪ್ರಕರಣ

    ಬುಧವಾರ ಬೆಳಗಿನ ವರೆಗಿನ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 17,921 ಕರೊನಾ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,12,62,707ಕ್ಕೆ ಏರಿದೆ. 1.09 ಕೋಟಿಗೂ ಅಧಿಕ ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಅವಧಿಯಲ್ಲಿ 133 ಜನರು ಮೃತಪಟ್ಟಿದ್ದು ಮರಣ ಸಂಖ್ಯೆ 1,58,063ಕ್ಕೆ ತಲುಪಿದೆ. ಸೋಂಕು ತಗಲಿದವರಲ್ಲಿ ಒಟ್ಟು 1,09,20,046 ಜನರು ಗುಣಮುಖರಾಗಿದ್ದು ಚೇತರಿಕೆ ರಾಷ್ಟ್ರೀಯ ದರ ಶೇ. 96.96 ಆಗಿದೆ. ಮರಣ ದರ ಶೇ. 1.40 ಆಗಿದೆ. 1,84,598 ಸಕ್ರಿಯ ಪ್ರಕರಣಗಳಿದ್ದು ಶೇ. 1.64 ಆಗಿದೆ.

    22 ಕೋಟಿ ಸ್ಯಾಂಪಲ್ ಪರೀಕ್ಷೆ

    ದೇಶದಲ್ಲಿ ಸೋಂಕು ಪತ್ತೆಗಾಗಿ ಮಾರ್ಚ್ 9ರ ವರೆಗೆ ಒಟ್ಟು 22,34,79,877 ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts