ರಾಮನಗರ: ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ವಿಡಿಯೋವನ್ನು ರಿಲೀಸ್ ಮಾಡಿದ್ದ ಹಾಗೂ ಈ ಬಗ್ಗೆ ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ.
ಈ ಬಗ್ಗೆ ಸ್ವತಃ ದಿನೇಶ್ ಕಲ್ಲಹಳ್ಳಿಯೇ ಹೇಳಿದ್ದಾರೆ. ಕನಕಪುರದಲ್ಲಿ ಮಂಗಳವಾರ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ಪ್ರಕರಣ ಬೆಳಕಿಗೆ ಬಂದ ಮೇಲೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ. ಇಂತಹ ಬೆದರಿಕೆಗೆ ಹೆದರುವುದಿಲ್ಲ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ಕೊಡುತ್ತೇನೆ. ನನ್ನ ಜತೆ ಯಾವ ಪ್ರಭಾವಿ ವ್ಯಕ್ತಿಗಳೂ ನಿಂತಿಲ್ಲ ಎಂದರು.
ದೂರಿನ ಜತೆಗೆ ಸಂಬಂಧಟ್ಟ ಮಾಹಿತಿಯನ್ನು ಕೊಟ್ಟಿದ್ದೇನೆ. ನಕಲಿ ಸಿಡಿ ಎಂಬ ಮಾತೂ ಕೇಳಿಬರುತ್ತಿದೆ. ಆದಷ್ಟು ಬೇಗ ಈ ಕುರಿತು ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬರಲಿ ಎಂದರು. ಪ್ರಧಾನಿಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಕೋರುತ್ತೇನೆ ಎಂದರು. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗೋವರೆಗೂ ಹೋರಾಟ ಮಾಡುತ್ತೇನೆ. ನನ್ನಜತೆ ಯಾವ ಪ್ರಭಾವಿಗಳೂ ಇಲ್ಲ ಎಂದರು.