ಬಾಳೆಹೊನ್ನೂರು: ಹುಟ್ಟು-ಸಾವು ಯಾರನ್ನೂ ಬಿಟ್ಟಿಲ್ಲ. ಹುಟ್ಟನ್ನು ಅರ್ಥ ಮಾಡಿಕೊಂಡರೂ ಸಾವನ್ನು ತಿಳಿದುಕೊಳ್ಳುವುದು ಕಷ್ಟ. ನಿಜವಾದ ಪಾರಮಾರ್ಥಿಕ ಜ್ಞಾನವು ಶಾಂತಿ, ನೆಮ್ಮದಿಗೆ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಭದ್ರಾ ನದಿ ತಟದಲ್ಲಿ ಮಂಗಳವಾರ ಜರುಗಿದ ಸುರಗಿ ಸಮಾರಾಧನೆ ಮತ್ತು ಇಷ್ಟಲಿಂಗ ಮಹಾಪೂಜೆ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜಾತಿ ಬಂದು ಪ್ರೀತಿ, ಮಾತು ಬಂದು ಕೃತಿ, ಬೋಧನೆ ಬಂದು ಸಾಧನೆ, ವಿಜ್ಞಾನ ಬಂದು ಶಾಂತಿ, ಸಮೃದ್ಧಿ ಬಂದು ಸಂಸ್ಕೃತಿ, ಬುದ್ಧಿ ಬಂದು ಶ್ರದ್ಧೆ ಇಲ್ಲದಂತಾಗಿದೆ. ಬುದ್ಧಿ ವಿಕಾಸಗೊಂಡಷ್ಟು ಭಾವನೆ ಬೆಳೆಯುತ್ತಿಲ್ಲ. ಮನುಷ್ಯನಿಗೆ ಧರ್ಮ ನೀಡುವ ಫಲ ಬೇಕಾಗಿದೆ. ಆದರೆ ಧರ್ವಚರಣೆ, ಅನುಸಂಧಾನ ಬೇಕಿಲ್ಲ. ಬದುಕಿನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಶಿವತಪಸ್ಸು, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಇವು ಶಿವಯೋಗ ಸಾಧನೆಯ ಸೋಪಾನಗಳು. ಷಟ್ಸ್ಥಲಗಳ ಸಾಧನೆ ಮೂಲಕ ಜೀವಾತ್ಮ ಪರಮಾತ್ಮನಾಗಲು ಸಾಧ್ಯ ಎಂದು ತಿಳಿಸಿದರು.
ಜ್ಞಾನಕ್ರಿಯಾ ಮಾರ್ಗ ಸಮನ್ವಯಗೊಳಿಸಿ ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮದ ಗುರಿ. ಸರ್ವ ಜನತೆಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗಿ ಬದುಕಿನಲ್ಲಿ ಶ್ರೇಯಸ್ಸನ್ನು ಜಗದ್ಗುರು ರೇಣುಕಾಚಾರ್ಯರು ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಅನುಗ್ರಹಿಸಲಿ ಎಂದು ಹಾರೈಸಿದರು.
ಶಾಸಕ ಟಿ.ಡಿ.ರಾಜೇಗೌಡ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಹರಿಹರ ಕೊಂಡಜ್ಜಿ ಮನೆತನದ ಕೊಟ್ರಮ್ಮ ತೋಟಪ್ಪ ಮತ್ತು ಮಕ್ಕಳು ಇಷ್ಟಲಿಂಗ ಪೂಜಾ ಸೇವೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ರೋಣ ತಾಲೂಕು ಅಬ್ಬಿಗೇರಿ ಹಿರೇಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಗೋಧಿ ಪಾಯಸ ಪ್ರಸಾದ ವ್ಯವಸ್ಥೆ ಮಾಡಿದ್ದರು. ಭಕ್ತಾದಿಗಳು ಭದ್ರಾ ನದಿಯಲ್ಲಿ ಮಿಂದು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು. 35ಕ್ಕೂ ಹೆಚ್ಚು ಮಠಾಧೀಶರು ಸುರಗಿ ಸಮಾರಾಧನಾ ಪೂಜೆಯಲ್ಲಿ ಪಾಲ್ಗೊಂಡಿದ್ದರು.